ಟೀಮ್ ಇಂಡಿಯಾದಲ್ಲಿ ತಮ್ಮ ಬೌಲಿಂಗ್ ಮೂಲಕವೇ ಮಿಂಚಿದ್ದ ವೇಗದ ಬೌಲರ್‌ಗಳಲ್ಲಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಕೂಡ ಪ್ರಮುಖರು. ಮೂಲತ ಕರ್ನಾಟಕದವರಾದ ವೆಂಕಟೇಶ ಪ್ರಸಾದ್ ಅನೇಕ ಹಲವಾರು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
1969ರ ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಜನಿಸಿರುವ ವೆಂಕಟೇಶ ಅವರ ಪೂರ್ಣ ಹೆಸರು ಬಾಪು ಕೃಷ್ಣರಾವ್ ವೆಂಕಟೇಶ್ ಪ್ರಸಾದ್. ಬಲಗೈ ಮಧ್ಯಮ ವೇಗದ ಬೌಲರ್ ಆಗಿ ಸೈ ಎನಿಸಿಕೊಂಡ ಇವರು, 1994 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಬಳಿಕ ಜಾವಗಲ್ ಶ್ರೀನಾಥ್ ಅವರೊಂದಿಗೆ ಬೌಲಿಂಗ್ ಸಂಯೋಜನೆಯಲ್ಲಿ ಮೆಚ್ಚುಗೆ ಪಡೆದರು.
ಭಾರತದ ಪರ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಕಿಂಗ್ಸ್ XI ಪಂಜಾಬ್ ತಂಡಕ್ಕೆ ಹಾಗೂ 2007 ರಿಂದ 2009 ರವರೆಗೂ ಭಾರತೀಯ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ತರಬೇತುದಾರರಾಗಿದ್ದರು. ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಕೆಲಸ ಮಾಡಿದ್ದಾರೆ.
ಟೆಸ್ಟ್: 33 ಟೆಸ್ಟ್ ಪಂದ್ಯಗಳನ್ನು ಆಡಿರುವ ಪ್ರಸಾದ್ 35ರ ಸರಾಸರಿಯೊಂದಿಗೆ 96 ವಿಕೆಟ್‌ಗಳನ್ನು ಪಡೆದಿದ್ದಾರೆ. ಪಂದ್ಯವೊಂದರಲ್ಲಿ 7 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಹಾಗೂ ಒಂದು ಬಾರಿ 10 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. 33ಕ್ಕೆ 6 ವಿಕೆಟ್ ಇವರ ಅತ್ಯುತ್ತಮ ಬೌಲಿಂಗ್ ದಾಳಿಯಾಗಿದೆ.
ಏಕದಿನ ಕ್ರಿಕೆಟ್: 161 ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಾದ್, 32.30 ಸರಾಸರಿಯಲ್ಲಿ 196 ವಿಕೆಟ್ ಉರುಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 27 ರನ್‌ಗಳಿಗೆ 5 ವಿಕೆಟ್ ಪಡೆದಿದ್ದು, ವೆಂಕಟೇಶ ಅವರ ಉತ್ತಮ ಸಾಧನೆಯಾಗಿದೆ.
1994 ರಿಂದ ಭಾರತಕ್ಕಾಗಿ ಮೈದಾನಕ್ಕಿಳಿದ ವೆಂಕಟೇಶ ಪ್ರಸಾದ್ 2001ರಲ್ಲಿ ಶ್ರೀಲಂಕಾದ ಟೆಸ್ಟ್ ಸರಣಿಯ ನಂತರ ಅವರನ್ನು ಭಾರತೀಯ ತಂಡದಿಂದ ಕೈಬಿಡಲಾಯಿತು. ನಿವೃತ್ತಿಗೆ ಮುನ್ನ ಪ್ರಸಾದ್ ಎಲ್ಲಾ ರೀತಿಯಲ್ಲಿ ತಂಡಕ್ಕೆ ಮರಳುವಲ್ಲಿ ವಿಫಲರಾದರು. ಬಳಿಕ ಅವರು 2005 ರಲ್ಲಿ ನಿವೃತ್ತಿ ಹೊಂದಿದರು.
ಪ್ರಶಸ್ತಿ: ವೆಂಕಟೇಶ್ ಪ್ರಸಾದ್ ಕರ್ನಾಟಕ ತಂಡ ಪ್ರತಿನಿಧಿಸುವಾಗ ಎರಡು ರಣಜಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ನೀಡಿದ ಪ್ರಸಾದ್ ಅವರ ಕೊಡುಗೆಗಾಗಿ 2000 ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಯಿತು. 1996-97 ರಲ್ಲಿ ಅತ್ಯುತ್ತಮ ಬೌಲಿಂಗ್‌ಗಾಗಿ ವರ್ಷದ ಸಿಯಟ್(CEAT) ಅಂತಾರರಾಷ್ಟ್ರೀಯ ಕ್ರಿಕೆಟಿಗ ಎಂದು ಹೆಸರು ಪಡೆದರು.




















