ರೈತರನ್ನು ಉಳಿಸಲು ಮೆಕ್ಕೆಜೋಳ ಖರೀದಿ ಆರಂಭಿಸಿ

0
10

ಹಾವೇರಿ: ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಸಲು ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಟ್ಟು ಖರೀದಿಗೆ ಸೂಚನೆ ನೀಡಿದರೆ ಅವರು ಖರೀದಿ ಆರಂಭಿಸುತ್ತಾರೆ. ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಉಳಿಸಲು ನೀವು ಈ ಕೆಲಸ ಮಾಡಬೇಕು. ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ರೈತರು ನಡೆಸುತ್ತಿರುವ ಸತ್ಯಾಗ್ರಹ ಹಾಗೂ ಪ್ರತಿಭಟನೆ ನಿರತ ರೈತರ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ತಾವು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಹೋರಾಟ ನಡೆಸಿದ್ದೀರಿ, ಈ ಸರ್ಕಾರ ಚಾಟಿ ಏಟಿಗೆ ಅಷ್ಟೆ ಸ್ಪಂದನೆ ಮಾಡುತ್ತದೆ. ಮನವಿ ಕೊಟ್ಟರೆ ಸಂದಿಸುವುದಿಲ್ಲ. ಮಳೆ ಬಿದ್ದ ಪರಿಹಾರ ಕಳೆದ ವರ್ಷ ಕೊಡಲೇ ಇಲ್ಲ. ಎನ್‌ಡಿಆರ್‌ಎಫ್‌ನಿಂದ ಬಂದ ಹಣವನ್ನು ಕೊಡಲೇ ಇಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ 6 ಸಾವಿರಕ್ಕೆ 4 ಸಾವಿರ ಸೇರಿಸಿ ನಾವು ಕೊಟ್ಟಿದ್ದೇವು ಅದನ್ನು ನಿಲ್ಲಿಸಿದರು. ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೇವು ಅದನ್ನು ನಿಲ್ಲಿಸಿದರು. ಕಬ್ಬಿನ ಬೆಲೆಗೆ ರೈತರು ಹೋರಾಟ ಮಾಡುವವರೆಗೂ ದರ ನೀಡಲಿಲ್ಲ. ನಾನೇ ಸಿಎಂ ಆಗಿದ್ದಾಗ ಎಸ್ಎಪಿ ಕಾಯ್ದೆ ತಂದಿದ್ದೇನೆ. ರೈತರಿಗೆ ಎಷ್ಟು, ಕಾರ್ಖಾನೆಗಳಿಗೆ ಎಷ್ಟು ಪಾಲು ಎಂದು ಸ್ಪಷ್ಟವಾಗಿದೆ. ಅದನ್ನು ನೋಡದೇ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಿದರು ಎಂದರು.

ಕೇಂದ್ರ ಸರ್ಕಾರ ದರ ಕಡಿಮೆಯಾದರೆ ಎಂಎಸ್‌ಪಿ ಮೂಲಕ ಆಗಿನ ದರವನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಎಂಎಸ್‌ಪಿ ಕಾನೂನಿನಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಅದರ ಮೂಲಕ ಸಹಾಯ ಮಾಡಿ, ಕುಂಟು ನೆಪ ಯಾಕೆ ಹೇಳುತ್ತೀರಿ, ನಾನೂ ಕೂಡ ಕೇಂದ್ರ ಕೃಷಿ ಸಚಿವರನ್ನು ಬೇಟಿ ಮಾಡಿ, ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಸ್ಪಂದಿಸುವಂತೆ ಮನವಿ ಮಾಡುತ್ತೇನೆ. ನಾವು ಯಾವಾಗಲೂ ರೈತರ ಪರವಾಗಿ ನಿಲ್ಲುತ್ತೇವೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. 10 ಲಕ್ಷ ಮೆಟ್ರಿಕ್ ಟನ್ ಖರಿದಿಸುವುದಾಗಿ ಆದೇಶ ಮಾಡಿದ್ದಾರೆ. ನೆಪ ಹೇಳದೇ 10 ಲಕ್ಷ ಮೆಟ್ರಿಕ್ ಟನ್ ರೈತರಿಂದ ನೇರವಾಗಿ ಖರೀದಿ ಮಾಡಲಿ, ಪೆಟ್ರೋಲ್‌ಗೆ ಎಥೆನಾಲನ್ನು ಶೇ. 20 ರಷ್ಟು ಸೇರಿಸಬೇಕೆನ್ನುವುದು ಕೇಂದ್ರದ ನೀತಿ. ಇವರಿಗೆ ಎಷ್ಟು ಕಾರ್ಖಾನೆ ತೆರೆಯಬೇಕು ಎನ್ನುವುದು ಗೊತ್ತಿಲ್ಲ. ಕಾರ್ಖಾನೆ ಮಾಲಿಕರ ಪರವಾಗಿ ಮಾತನಾಡುತ್ತಾರೆ. ಏಜೆಂಟರಿಂದ ಖರೀದಿ ಮಾಡುತ್ತಿದ್ದಾರೆ. ಕರ್ನಾಟಕದ 19 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಮೆಕ್ಕೆಜೋಳದ ಖರೀದಿ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುವವರೆಗೂ ವಿಧಾನ ಮಂಡಲದಲ್ಲಿ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಿದರು.

ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಈಗಾಗಲೇ ಸಿಎಂಗೆ ಪತ್ರ ಬರೆದಿದ್ದೇನೆ. ಅವರು ಖರೀದಿಸಲು ಆದೇಶ ಮಾಡಿದ್ದಾರೆ. ಆದರೆ, ಯಾವ ಏಜೆನ್ಸಿಯಿಂದ ಖರೀದಿ ಮಾಡುತ್ತಾರೆ ಎಂದು ತಿಳಿಸುತ್ತಿಲ್ಲ. ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಟ್ಟು ಖರೀದಿಗೆ ಸೂಚನೆ ನೀಡಿದರೆ ಅವರು ಖರೀದಿ ಆರಂಭಿಸುತ್ತಾರೆ. ಯಾರು ಸಿಎಂ ಆಗಿರುತ್ತೀರೋ ಗೊತ್ತಿಲ್ಲ. ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಉಳಿಸಲು ನೀವು ಈ ಕೆಲಸ ಮಾಡಬೇಕು. ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ, ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು. ರೈತರ ಸಾಲಗಳಿಗೆ ಸಿಬಿಲ್ ಅನ್ವಯಿಸದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಸಂದನೆ ದೊರೆಯಲಿದೆ ಎಂದು ಇದೇ ವೇಳೆ ಹೇಳಿದರು.

ಬೆಡ್ತಿ ವರದಾ ಜೋಡಣೆ ಸಕಾರಾತ್ಮಕ ಸ್ಪಂದನೆ: ಬೆಡ್ತಿ ವರದಾ ನದಿ ಜೋಡಣೆ ಯೋಜನೆ ಜಾರಿಗೆ ನಾವು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡಿದ್ದೇವೆ. ಈಗ ಕೇಂದ್ರ ಸರ್ಕಾರ ಆಸಕ್ತಿ ತೆಗೆದುಕೊಂಡು ಡಿಪಿಆರ್ ಮಾಡಲು ಅನುಮತಿ ನೀಡಿದೆ. ರಾಜ್ಯ ಸರ್ಕಾರ ಡಿಪಿಆರ್ ಸಿದ್ಧತೆಗೆ ಕ್ರಮ ಕೈಗೊಳ್ಳುತ್ತಿದೆ. ಡಿಪಿಆರ್ ಕೇಂದ್ರಕ್ಕೆ ಹೋದ ತಕ್ಷಣ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾರೋ ನಾಲ್ಕು ಜನ ಬಂದು ಮನವಿ ಕೊಟ್ಟರೆ ಸಿಎಂ ಸ್ಪಂದಿಸಬಾರದು. ಈ ರಾಜ್ಯದ ನೀರಿನ ಸಂಪತ್ತು ಎಲ್ಲರಿಗೂ ಸೇರಿದ್ದು, ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟುತ್ತದೆ. ಮಹಾರಾಷ್ಟ್ರದವರೇ ಇಟ್ಟುಕೊಳ್ಳಲು ಆಗುತ್ತದೆಯೇ, ಉತ್ತರ ಕನ್ನಡದ ನಿಸರ್ಗಕ್ಕೆ ತೊಂದರೆಯಾಗದಂತೆ, ಯಾವುದೇ ಮುಳುಗಡೆಯಾಗದಂತೆ ಯೋಜನೆ ಜಾರಿ ಮಾಡಲಾಗುವುದು. ಅವರ ಮನವಿಗೆ ಸಿಎಂ ಯಾವುದೇ ರೀತಿಯ ಸ್ಪಂದನೆ ಮಾಡಬಾರದು ಎಂದು ಮನವಿ ಮಾಡಿದರು.

Previous articleಖಾಸಗಿ ಶಾಲೆಗಳಿಗೆ ಖಡಕ್ ವಾರ್ನಿಂಗ್:‌‌ ಪೋಷಕರಿಗೆ‌ ಬಿಗ್‌ ರೀಲಿಫ್!
Next articleWPL 2026: ಡಬ್ಲ್ಯುಪಿಎಲ್ ಮುಂಬೈ ಇಂಡಿಯನ್ಸ್ ಮತ್ತೆ ಬಲಿಷ್ಠ

LEAVE A REPLY

Please enter your comment!
Please enter your name here