ಆಧಾರ್ ಅಪ್ಡೇಟ್ ಉಚಿತವಾಗಿ ಮಾಡಿಕೊಳ್ಳಿ: ಜಿಲ್ಲಾಧಿಕಾರಿ

0
41

ಉತ್ತರ ಕನ್ನಡ (ದಾಂಡೇಲಿ): ಈಗಾಗಲೇ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದಿರುವ ಸಾರ್ವಜನಿಕರು ತಮ್ಮ ವಾಸಸ್ಥಳದ ಬದಲಾವಣೆಯಾಗಿದ್ದಲ್ಲಿ, ಪ್ರಸಕ್ತ ವಿಳಾಸದ ಬದಲಾವಣೆಯನ್ನು 14 ಜೂನ್ 2026ರ ವರೆಗೆ ಆನ್‌ಲೈನ್‌ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಆಧಾರ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧಾರ್‌ ಕಾರ್ಡ್‌ನಲ್ಲಿ 10 ವರ್ಷಗಳಿಂದ ವಿಳಾಸ ಬದಲಾವಣೆ ಮಾಡಿಕೊಳ್ಳದ ಸಾರ್ವಜನಿಕರು myAadhaar.uidai.gov.in ಮೂಲಕ 2026ರ ಜೂನ್ 14ರ ವರೆಗೆ ಪ್ರಸಕ್ತ ವಾಸಸ್ಥಳದ ಪುರಾವೆಯನ್ನು ಸಲ್ಲಿಸಿ, ಉಚಿತವಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಈಗಾಗಲೇ ಆಧಾರ್ ಕಾರ್ಡ್ ಪಡೆದಿರುವ 5 ವರ್ಷ ಮತ್ತು 15 ವರ್ಷ ಪೂರ್ಣಗೊಂಡಿರುವ ಮಕ್ಕಳ ಆಧಾರ್ ಅಪ್ಡೇಟ್ ಅನ್ನು ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಅಂಚೆ ಕಚೇರಿಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಯಾವುದೇ ರೀತಿಯ ತಾಂತ್ರಿಕ ತೊಂದರೆಗಳಿದ್ದಲ್ಲಿ ಜಿಲ್ಲಾ ಆಧಾರ್ ಸಮಾಲೋಚಕರನ್ನು ಸಂಪರ್ಕಿಸಿ ಅವರ ನೆರವು ಪಡೆಯುವುದರ ಮೂಲಕ ಜಿಲ್ಲೆ ಸಾರ್ವಜನಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಸಂಬಂಧಿತ ಯಾವುದೇ ಸಮಸ್ಯೆಗಳಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳ ಆಧಾರ್ ಅಪ್ಡೇಟ್ ಮಾಡುವ ಕುರಿತಂತೆ ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಶಿಬಿರ ಆಯೋಜಿಸುವಂತೆ ತಿಳಿಸಿದ ಅವರು ಎಂಡೋ ಸಲ್ಫಾನ್ ಪೀಡಿತರಿಗೆ ಮನೆಗಳಿಗೆ ತೆರಳಿ ಆಧಾರ್ ಸೌಲಭ್ಯ ಒದಗಿಸಬೇಕು. ಪ್ರಸ್ತುತ ಜಿಲ್ಲೆಯಲ್ಲಿ 16,65,285 ಆಧಾರ್ ಕಾರ್ಡ್‌ಗಳಿದ್ದು, ಇವುಗಳಲ್ಲಿ 15,68,157 ಕಾರ್ಡ್‌ಗಳು ಮೊಬೈಲ್ ಸೀಡ್ ಆಗಿದ್ದು ಬಾಕಿ ಇರುವ 97,128 ಆಧಾರ್ ಕಾರ್ಡ್‌ಗಳ ಸೀಡಿಂಗ್ ಮಾಡುವ ಕುರಿತಂತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಆಧಾರ್ ಕೇಂದ್ರಗಳು ಮತ್ತು ಆಧಾರ್ ತಿದ್ದುಪಡಿ ಮಾಡುವ ಕೇಂದ್ರಗಳು ಕಾರ್ಯನಿರ್ವಹಿಸದಂತೆ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಬೆಂಗಳೂರಿನ ಆಧಾರ್ ಪ್ರಾದೇಶಿಕ ಕೇಂದ್ರದ ಮೆನೇಜರ್ ಮೊಹಮದ್ ಮುಸಾಬ್, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಹಾಗೂ ಲೀಡ್ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಅಧಿಕಾರಿಗಳು ಹಾಜರಿದ್ದರು.

Previous articleಯಕ್ಷಗಾನ ಕಲಾವಿದರಿಗೆ ಅಪಮಾನ: ಬಿಳಿಮಲೆ ವಜಾಕ್ಕೆ ಆಗ್ರಹ
Next articleವಾಹನ ಸವಾರರೇ ಗಮನಿಸಿ: ಟ್ರಾಫಿಕ್ ಫೈನ್ ಮೇಲೆ ಮತ್ತೆ 50% ಡಿಸ್ಕೌಂಟ್! ಇಂದೇ ಮುಗಿಸಿಕೊಳ್ಳಿ

LEAVE A REPLY

Please enter your comment!
Please enter your name here