ನಿರ್ದೇಶನ: ರೂಪೇಶ್ ಶೆಟ್ಟಿ
ನಿರ್ಮಾಣ: ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಹಾಗೂ ಮಂಜುನಾಥ್ ಅತ್ತಾವರ
ತಾರಾಗಣ: ರೂಪೇಶ್ ಶೆಟ್ಟಿ, ಸುನಿಲ್ ಶೆಟ್ಟಿ, ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್ ಹಾಗೂ ನವೀನ್ ಡಿ ಪಡೀಲ್ ಮತ್ತಿತರರು.
ರೇಟಿಂಗ್-3
ಜಿ.ಆರ್.ಬಿ
ಸಿಂಹಬೆಟ್ಟು ಎಂಬ ಗ್ರಾಮ. ಆ ಊರಿನಲ್ಲಿ ಏನೇ ಶುಭ ಸಮಾರಂಭಗಳು, ಸಮಸ್ಯೆಗಳು ಎದುರಾದರೂ ಸತ್ಯನ (ರೂಪೇಶ್ ಶೆಟ್ಟಿ) ನಿಲ್ಲುತ್ತಾರೆ. ಎಂಎಲ್‌ಎ ಬಲಗೈ ಬಂಟನಾಗಿ ಸತ್ಯ ಎಲ್ಲಾ ಕಾರ್ಯಗಳಿಗೂ ಸದಾ ಮುಂದು. ರಾಜಕಾರಣಿಗಳು ಸ್ವಹಿತಾಸಕ್ತಿಯಿಂದಲೇ ಬಹುತೇಕ ಕೆಲಸಗಳನ್ನು ಮಾಡುವುದು ಎಂಬುದರ ಅರಿವು ತಡವಾಗಿ ಸತ್ಯನಿಗೆ ಅರಿವಾಗುತ್ತದೆ.
ಅಷ್ಟರಲ್ಲಾಗಲೇ ಒಂದಷ್ಟು ಅನಾಹುತಗಳು ನಡೆದುಹೋಗಿರುತ್ತವೆ. ಎಂಎಲ್‌ಎ ಮೇಲೆ ಯಾವುದೇ ಲೋಪದೋಷಗಳು ಬರದಂತೆ ತಡೆಯುತ್ತಿದ್ದ ಸತ್ಯನಿಗೆ ಎಂಎಲ್‌ಎ ನಿಜರೂಪ ಬಯಲಾಗುತ್ತದೆ. ಅಲ್ಲಿಯವರೆಗೂ ಊರಿನ ಜನರು ಯಾವ ಪರಿ ಮೋಸ ಹೋಗಿದ್ದಾರೆ ಎಂಬುದು ಸತ್ಯನಿಗೆ ಸತ್ಯದ ಅರಿವಾಗುತ್ತದೆ. ಅಲ್ಲಿಗೆ ಮಧ್ಯಂತರ…
ಮೊದಲಾರ್ಧ ಊರು, ಊರಿನವರ ಉಸಾಬರಿ ನೋಡಿಕೊಳ್ಳುವುದರಲ್ಲೇ ಬ್ಯುಸಿಯಾಗಿದ್ದ ಸತ್ಯನ ಅಸಲಿ ಆಟ ದ್ವಿತೀಯಾರ್ಧದಲ್ಲಿ ಶುರುವಾಗುತ್ತದೆ. ತುಸು ಹೆಚ್ಚೇ ಮಾಸ್ ಅಂಶಗಳು ಅಡಕವಾಗಿರುವುದು ಸೆಕೆಂಡ್ ಹಾಫ್‌ನಲ್ಲಿ. ಇಡೀ ಸಿನಿಮಾವನ್ನು ಕರಾವಳಿಯ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರೂಪೇಶ್ ಶೆಟ್ಟಿ. ಅಲ್ಲಿನ ರಾಜಕೀಯ, ಪಂದ್ಯಾವಳಿಗಳು, ಜನರ ಬೇಡಿಕೆಗಳು, ಸಮಸ್ಯೆಗಳು… ಇತ್ಯಾದಿಗಳ ದರ್ಶನ ‘ಜೈ’ ಮೂಲಕ ಆಗುತ್ತದೆ.
ಕಥೆಯಲ್ಲಿ ಹೊಸತನ ಕಾಣದಿದ್ದರೂ, ನಿರೂಪಣೆಯಲ್ಲಿ ವೇಗ, ಮೇಕಿಂಗ್‌ನಲ್ಲಿ ಅದ್ಧೂರಿತನ ತುಂಬುವ ಪ್ರಯತ್ನ ಮಾಡಲಾಗಿದೆ. ಸಿನಿಮಾ ಮುಗಿಯುವ ಹಂತಕ್ಕೆ ಬರುತ್ತಿದೆ ಎನ್ನುವ ಹೊತ್ತಿಗೆ ಸುನಿಲ್ ಶೆಟ್ಟಿ ಆಗಮನವಾಗುತ್ತದೆ. ಅಲ್ಲಿಂದ ಸಿನಿಮಾಕ್ಕೆ ಮತ್ತೊಂದು ತೂಕ ಪ್ರಾಪ್ತಿಯಾಗುತ್ತದೆ. ಎಲ್ಲವೂ ಊಹೆಗೆ ತಕ್ಕಂತೆ ಸಾಗುತ್ತಿರುತ್ತದೆ ಎಂಬುದು ಸಮಾಧಾನಕರ ವಿಷಯ. ಬೇಕೆಂದಾಗ ಹಾಡುಗಳು ಹಾಗೂ ಫೈಟುಗಳು ಹಾಜರಿ ಹಾಕುತ್ತಿರುತ್ತವೆ.
ರೂಪೇಶ್ ಶೆಟ್ಟಿ ನಟನೆಯಲ್ಲಿ ಎಂದಿನಂತೆ ಸಲೀಸು. ಸುನಿಲ್ ಶೆಟ್ಟಿ ಮಾಸ್ ಎಂಟ್ರಿ ಚಿತ್ರದ ತಿರುವನ್ನು ಬದಲಾಯಿಸುತ್ತದೆ. ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ ಬೋಳಾರ್ ಹಾಗೂ ನವೀನ್ ಡಿ ಪಡೀಲ್ ಮತ್ತಿತರರು ಕಥೆಗೆ ತಕ್ಕಂತೆ ಒಗ್ಗಿಕೊಂಡಿದ್ದಾರೆ.


























