ರೆಡ್ಡಿ ಕುಟುಂಬಸ್ಥರ ಅಕ್ರಮ ಆಸ್ತಿ ಮುಟ್ಟುಗೋಲು ವಿಳಂಬ: ಹೈಕೋರ್ಟ್ ಗರಂ

0
23
ರೆಡ್ಡಿ

ಬೆಂಗಳೂರು : ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ 65 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆ ಬಾಳುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಳೆದ ಏಳು ವರ್ಷಗಳಿಂದ ಕ್ರಮಕ್ಕೆ ಮುಂದಾಗದ ಕೇಂದ್ರೀಯ ತನಿಖಾ ದಳ (ಸಿಬಿಐ)ವನ್ನು ಹೈಕೋರ್ಟ್​ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗಾಲಿ ಜನಾರ್ದನ ರೆಡ್ಡಿಗೆ ಸೇರಿದ 19 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿಗೆ ವಿಳಂಬ ಮಾಡಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ಹಾಜರಾಗಿದ್ದ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ ಚಿನ್ನಪ್ಪ, 65 ಕೋಟಿ ರೂಪಾಯಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ 2015ರಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಈವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಆದರೆ 19 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳಿಗೆ ಅನುಮತಿ ವಿಳಂಬವಾಗಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ ಎಂದು ವಿವರಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, 65 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳ ಮುಟ್ಟುಗೋಲು ಪ್ರಕರಣ ಏನಾಗಿದೆ. ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗೆ ನಂಬರ್ ಸಹ ನೀಡಲಾಗಿಲ್ಲ. ಸಿಬಿಐ ಎಲ್ಲ ಪ್ರಕರಣಗಳಲ್ಲಿ ಇದೇ ನಡೆ ಅನುಸರಿಸುತ್ತದೆಯೇ? ಇಲ್ಲವೇ ಈ ಪ್ರಕರಣದಲ್ಲಿ ಮಾತ್ರ ಈ ನಡೆಯೇ? ಎಂದು ಪ್ರಶ್ನಿಸಿತು. ಏಳು ವರ್ಷಗಳಿಂದ ಏನೂ ಕ್ರಮ ಕೈಗೊಳ್ಳದ ಸಿಬಿಐ ನಡೆ ಆಘಾತವನ್ನುಂಟು ಮಾಡುತ್ತಿದೆ. ಆದರೂ, ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿತು.

Previous articleಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ: ಕರುನಾಡ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅನುಮತಿ
Next articleನೈಜ ಜನಾಶಯ ಬಿಂಬಿಸಿದ ಮೂರು ಪ್ರಸಂಗಗಳು