ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ರದ್ದು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಜನ ಆರೋಪಿಗಳಿಗೆ ಕಳೆದ ಆಗಸ್ಟ್ 14 ರಂದು ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪವಿತ್ರಾ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ, ಆರ್. ಮಹದೇವನ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, “ಆದೇಶ ಮತ್ತು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ಜಾಮೀನು ರದ್ದು ಮರುಪರಿಶೀಲನೆಗೆ ಯಾವುದೇ ಆಧಾರವಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ,” ಎಂದು ಪೀಠ ಹೇಳಿದೆ.
ಸುಪ್ರೀಂ ಮೆಟ್ಟಿಲೇರಿದ್ದ ಪವಿತ್ರಾಗೌಡ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎl ಆರೋಪಿ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಸೋಮವಾರ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನಟ ದರ್ಶನ್ ಸೇರಿ ಪ್ರಕರಣದ ಎಲ್ಲ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಮತ್ತು ಕಾನೂನುಬಾಹಿರ ಸಭೆಯಂತಹ ಗಂಭೀರ ಆರೋಪಗಳೊಂದಿಗೆ ದೋಷಾರೋಪ ನಿಗದಿಯಾಗಿತ್ತು.
ಇದರ ಬೆನ್ನಲ್ಲೇ ಪವಿತ್ರಾ ಗೌಡ ಅವರು ಈ ಕಾನೂನಾತ್ಮಕ ನಡೆ ತೆಗೆದುಕೊಂಡಿದ್ದರು. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಎಲ್ಲ ಆರೋಪಿಗಳನ್ನು ಮತ್ತೆ ಜೈಲಿಗೆ ಕಳುಹಿಸಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಹೈಕೋರ್ಟ್ ಅಕ್ಟೋಬರ್ ಮತ್ತು ಡಿಸೆಂಬರ್ 2024ರಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿಗೆ ಜಾಮೀನು ನೀಡಿತ್ತು.
ಆದರೆ, ಕರ್ನಾಟಕ ಸರ್ಕಾರವು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು ಮತ್ತು ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ಇದೀಗ, ಪವಿತ್ರಾ ಗೌಡ ಪರ ವಕೀಲರು, ಸುಪ್ರೀಂ ಕೋರ್ಟ್ ಹಿಂದಿನ ಆದೇಶದಲ್ಲಿ ಕೆಲವು ತಪ್ಪುಗಳಿವೆ. ಹೈಕೋರ್ಟ್ ನಿರ್ಧಾರ ಸರಿಯಾಗಿತ್ತು ಮತ್ತು ಸುಪ್ರೀಂ ಕೋರ್ಟ್ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾದಿಸಿದ್ದರು.
ಆದೇಶವನ್ನು ಪುನರ್ ಪರಿಶೀಲಿಸಿ, ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಸದ್ಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನವೆಂಬರ್ 6ರಂದು ಈ ಮಹತ್ವದ ಆದೇಶ ನೀಡಿದೆ.


























