ಮಂಗಳೂರಿನ ಹುಡುಗಿ ಜೆಮಿಮಾ ಶತಕದ ಮಿಂಚು– ಫೈನಲ್​ ತಲುಪಿದ ಭಾರತದ ವನಿತೆಯರು

0
95

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಐದು ವಿಕೆಟ್‌ಗಳ ಗೆಲುವು ಸಾಧಿಸಿ, ಮಹಿಳಾ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಈ ಮಹತ್ವದ ಗೆಲುವಿನಲ್ಲಿ ಬ್ಯಾಟಿಂಗ್ ತಾರೆ ಜೆಮಿಮಾ ರೋಡ್ರಿಗಸ್ ಅವರ ಪಾತ್ರ ಅಮೋಘವಾಗಿದೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೆಮಿಮಾ ಕ್ರೀಸ್‌ನಲ್ಲಿ ಬೇರೂರಿ ನಿಂತು ಆಸೀಸ್ ಬೌಲರ್‌ಗಳನ್ನು ತತ್ತರಗೊಳಿಸಿದರು. ಶತಕ ಬಾರಿಸಿದರೂ ಸಂಭ್ರಮಿಸದೆ, ತಂಡವನ್ನು ಗೆಲುವಿನ ದಡ ಸೇರಿಸುವುದು ಅವರ ಪ್ರಧಾನ ಗುರಿಯಾಗಿತ್ತು. ತಂಡ ಜಯ ಸಾಧಿಸಿದ ಕ್ಷಣದಲ್ಲಿ ಭಾವುಕರಾದ ಜೆಮಿಮಾ ಮೈದಾನದಲ್ಲೇ ಸಂತಸ ಕಣ್ಣೀರು ಸುರಿಸಿದರು.

134 ಎಸೆತ ಎದುರಿಸಿದ ಜೆಮಿಮಾ 14 ಬೌಂಡರಿಗಳ ನೆರವಿನಿಂದ ಅಜೇಯ 127 ರನ್‌ಗಳು ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ 167 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದರು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಚೇಸ್ ಆಗಿ ದಾಖಲಾಗಿತು.

ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರಿಗೆ ಕರಾವಳಿಯ ನಂಟು ಅಸ್ತಿತ್ವದಲ್ಲಿದೆ. ಅವರ ತಂದೆ ಇವಾನ್ ರೋಡ್ರಿಗಸ್ ಮಂಗಳೂರಿನವರು, ತಾಯಿ ಲ್ಯಾವಿಟಾ ರೋಡ್ರಿಗಸ್ ಉಡುಪಿಯವರು. ಕೇವಲ ನಾಲ್ಕು ವರ್ಷ ಪ್ರಾಯದಲ್ಲಿ ಕ್ರಿಕೆಟ್ ಹಿಡಿದಿದ್ದ ಜೆಮಿಮಾ, ಬಾಲ್ಯದಲ್ಲಿಯೇ ಅಣ್ಣಂದಿರಿಗೆ ಬೌಲಿಂಗ್ ಮಾಡುವುದರ ಮೂಲಕ ಅಭ್ಯಾಸ ಬೆಳೆಸಿಕೊಂಡಿದ್ದರು.

ಹುಡುಗಿಯರು ಕ್ರಿಕೆಟ್ ಆಡುತ್ತಾರೆಯೇ ಎಂದು ಪ್ರಶ್ನೆ ಕೇಳುತ್ತಿದ್ದ ಕಾಲದಲ್ಲಿ, 500 ಹುಡುಗರ ಮಧ್ಯೆ ಏಕೈಕ ಹುಡುಗಿಯಾಗಿ ಮೈದಾನಕ್ಕಿಳಿಯುತ್ತಿದ್ದಳು. ಹನ್ನೆರಡೂವರೆ ವಯಸ್ಸಿನಲ್ಲೇ ಮಹಾರಾಷ್ಟ್ರ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಳು. ಸೌರಾಷ್ಟ್ರ ವಿರುದ್ಧ ಅಜೇಯ 202 ರನ್, ಗುಜರಾತ್ ವಿರುದ್ಧ 178 ರನ್ ಬಾರಿಸಿದ ಆಕೆಯ ಪ್ರದರ್ಶನ ಆಯ್ಕೆಗಾರರ ಕಣ್ಣು ಹಿಡಿದಿತ್ತು.

ಶಾಲಾ ದಿನಗಳಲ್ಲಿ ಹಾಕಿಯಲ್ಲಿಯೂ ಚುರುಕಾಗಿದ್ದ ಜೆಮಿಮಾ, ಅಂತಿಮವಾಗಿ ಕ್ರಿಕೆಟ್ ಆಯ್ಕೆ ಮಾಡಿಕೊಂಡು ಇದೀಗ ಭಾರತ ತಂಡದ ಪ್ರಮುಖ ತಾರೆ ಆಗಿದ್ದಾಳೆ.

ಈ ಗೆಲುವಿನಿಂದ ಭಾರತ ಮಹಿಳಾ ತಂಡ 2005 ಮತ್ತು 2017 ನಂತರ ಮೂರನೇ ಬಾರಿ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಪೈಪೋಟಿ ನಡೆಸಲಿದೆ. ಯಾರೇ ಗೆದ್ದರೂ ಹೊಸ ಚಾಂಪಿಯನ್ ಉದಯಿಸಲಿದೆ.

Previous articleಬೆಂಗಳೂರು:”ಸ್ಮಾರ್ಟ್ ಲಾಕ್” ಹಗರಣ: ಸ್ಪೀಕರ್ ಯು.ಟಿ. ಖಾದರ್ ರಾಜೀನಾಮೆ..
Next articleಗೋಕರ್ಣ: ಕಡಲಬ್ಬರಕ್ಕೆ ದಡಕ್ಕೆ ತಳ್ಳಲ್ಪಟ್ಟ ಡಾಲ್ಫಿನ್ ರಕ್ಷಿಸಿದ ಯುವಕರು

LEAVE A REPLY

Please enter your comment!
Please enter your name here