ಶಾರ್ಟ್ ಸರ್ಕ್ಯೊಟ್‌ನಿಂದ ಕಬ್ಬಿಗೆ ಬೆಂಕಿ: ಬೆಂಕಿ ನಂದಿಸಲು ಯುವ ರೈತರ ಹರಸಾಹಸ

0
67

ಕುಳಗೇರಿ ಕ್ರಾಸ್ (ಬಾಗಲಕೋಟೆ): ಬೀರನೂರ ಗ್ರಾಮದ ಜಮಿನಿನಲ್ಲಿ ರೈತರು ಬೆಳೆದ ಕಟಾವಿಗೆ ಸಿದ್ದವಾಗಿದ್ದ ಕಬ್ಬಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕ ಬೆಂಕಿ ತಗುಲಿದ್ದು ಸುಮಾರು 15 ಎಕರೆಯಷ್ಟು ಕಬ್ಬು ಸುಟ್ಟು ಹೋಗಿದೆ.

ಬೀರನೂರ ಹಾಗೂ ಖಾನಾಪೂರ ಎಸ್‌ಕೆ ಗ್ರಾಮದ ರೈತರು ತಮ್ಮ ಜಮಿನುಗಳಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ. ಯಮನಪ್ಪ ಲೋಕಾಪೂರ, ದೊಡ್ಡಹನಮಂತ ಲೋಕಾಪೂರ, ಬಸವರಾಜ ಬೀರನೂರ, ಸಣ್ಣಹನಮಂತ ಲೋಕಾಪೂರ, ನಿಂಗಪ್ಪ ಅಂಬನ್ನವರ, ಕಲ್ಲಪ್ಪ ತೆಗ್ಗಿನಮನಿ ಈ ಎಲ್ಲ ರೈತರಿಗೆ ಸೇರಿದ ಸುಮಾರು 15 ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ.

ಇನ್ನೆನೂ 15 ದಿನಗಳಲ್ಲಿ ಕಬ್ಬು ಕಟಾವು ಮಾಡಲಾಗುತ್ತಿತ್ತು. ಆದರೆ ವಿದ್ಯುತ್ ಸ್ಪರ್ಶದಿಂದ ಬೆಂಕಿ ಹೊತ್ತಿಕೊಂಡು ನೋಡನೋಡುತ್ತಲೆ ಗಾಳಿ ರಭಸಕ್ಕೆ ನಾಲ್ಕೈದು ಎಕರೆ ಕಬ್ಬನ್ನು ಬೆಂಕಿ ತನ್ನ ಕೆನ್ನಾಲಿಗೆ ಚಾಚಿ ದಘದಘ ಉರಿಯತೊಡಗಿತು. ಕೆಲ ರೈತರು ಸೇರಿ ನೀರು ಬಳಸಿ, ಜೆ.ಸಿ.ಬಿ ತಂತು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ.

ಗಾಳಿಯ ರಭಸಕ್ಕೆ ಮತ್ತಷ್ಟು ಬೆಂಕಿ ಹೊತ್ತಿಕೊಂಡಿತು. ನಂತರ ಸೇರಿದ ಯುವ ರೈತರು ಮುಂದೆ ಹೋಗಿ ಕಬ್ಬಿನ ಪಡದಲ್ಲಿ ದಾರಿ ಮಾಡಿ ಪ್ರಾಣವನ್ನು ಲೆಕ್ಕಿಸದೆ ಒಂದು ಭಾಗದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸುವಲ್ಲಿ ಸಂಪೂರ್ಣ ಯಶಸ್ವಿಯಾದರು. ಪ್ರಜ್ಞಾವಂತ ಯುವ ರೈತರು ನೂರಾರು ಎಕರೆ ಕಬ್ಬು ಬೆಳೆ ಬೆಂಕಿಯಿಂದ ಕಾಪಾಡಿದರು.

ನರಗುಂದ ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಬಂದು ಇನ್ನೊಂದು ಭಾಗದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು. ಬೆಂಕಿ ನಂದಿಸಿ ನೂರಾರು ಎಕರೆ ಕಬ್ಬು ಉಳಿಸಿದ ರೈತರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ರೈತರು ಪತ್ರಿಕೆಗೆ ತಿಳಿಸಿದರು.

ನಾವು ಸಾಕಷ್ಟು ಬಾರಿ ಜೋತುಬಿದ್ದ ವಿದ್ಯುತ್ ತಂತಿಗಳನ್ನ ಸರಿಪಡಿಸುವಂತೆ ತಿಳಿಸಿದರೂ ಕೆಇಬಿ ಯವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ರೈತರು ಕೈಗೆಟಕುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನ ಸರಿಪಡಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ತಳವಾರ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

Previous articleರಂಗಸನ್ಸ್: ಅಗರಬತ್ತಿ ವ್ಯಾಪಾರದಿಂದ ಏರೋಸ್ಪೇಸ್ ಕ್ಷೇತ್ರದವರೆಗೆ ಹೊಸ ಮೈಲಿಗಲ್ಲು
Next articleಯಮುನೆಯಷ್ಟೇ ಅಲ್ಲ, ಕಾವೇರಿ, ಕೃಷ್ಣೆಯೂ ಮಲಿನ!

LEAVE A REPLY

Please enter your comment!
Please enter your name here