ಹಾವೇರಿ: ಕೌಟುಂಬಿಕ ಕಲಹದಿಂದ ಬೇಸತ್ತು, ತಾಯಿಯೊಬ್ಬರು ತನ್ನ 12 ವರ್ಷದ ಮಗಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತಾಲೂಕಿನ ವರದಾಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸವಿತಾ ನಾಗರಾಜ್ ಉಳ್ಳಾಗಡ್ಡಿ (38) ಮತ್ತು ಪುತ್ರಿ ಕಾವ್ಯಾ (12) ಮೃತಪಟ್ಟವರು. ವರದಿಗಳ ಪ್ರಕಾರ, ಗಂಡನ ಮನೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಜಗಳಗಳಿಂದ ಮನನೊಂದು ಸವಿತಾ ಈ ದುರಂತ ನಿರ್ಧಾರಕ್ಕೆ ಬಂದಿದ್ದಾರೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಸವಿತಾ, ಮಗಳು ಕಾವ್ಯಾಳೊಂದಿಗೆ ವರದಾ ನದಿಗೆ ಹಾರಿದ್ದಾರೆ. ಘಟನೆಯಲ್ಲಿ ಮಗಳು ಕಾವ್ಯಾಳ ಮೃತದೇಹ ಪತ್ತೆಯಾಗಿದ್ದು, ತಾಯಿ ಸವಿತಾ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮೃತ ಸವಿತಾ ಅವರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದಳು. ಇತ್ತೀಚೆಗಷ್ಟೇ ನಡೆದ ನವೋದಯ ಪರೀಕ್ಷೆಯಲ್ಲಿ ಕಾವ್ಯಾ ಉತ್ತೀರ್ಣಳಾಗಿದ್ದಳು. ಓದಿನಲ್ಲಿ ಮುಂದಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯ ಭವಿಷ್ಯವು ಮನೆಯ ಕಲಹದಿಂದಾಗಿ ಅಂತ್ಯಗೊಂಡಿದೆ. ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಪ್ರಕರಣವು ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.