ಕರ್ನಾಟಕದ ಮುಂದಿನ ಸಿಎಂ ಕುರಿತು ಕೋಡಿಮಠದ ಶ್ರೀಗಳ ಭವಿಷ್ಯ: ಸಿದ್ದರಾಮಯ್ಯಗೆ ಕಂಟಕವಿಲ್ಲವೇ?

0
20

ಕರ್ನಾಟಕ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿರುವ ಈ ಸಂದರ್ಭದಲ್ಲಿ, ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ತಮ್ಮ ಹಿಂದಿನ ಭವಿಷ್ಯವನ್ನು ಪುನರುಚ್ಚರಿಸಿ ಕುತೂಹಲ ಮೂಡಿಸಿದ್ದಾರೆ. “ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ” ಎಂಬ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿವೆ.

ಹಾಸನ ಜಿಲ್ಲೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶ್ರೀಗಳು, ಕಳೆದ ಯುಗಾದಿಯ ಸಂದರ್ಭದಲ್ಲೇ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಸುಳಿವು ನೀಡಿದ್ದರು. ಸದ್ಯ, ನವೆಂಬರ್‌ನಲ್ಲಿ ಕ್ರಾಂತಿ ಆಗಲಿದೆ ಎಂಬ ಸುದ್ದಿ ಮತ್ತು ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ನಡೆಯುತ್ತಿರುವಾಗ, ಶ್ರೀಗಳ ಹೇಳಿಕೆಗಳು ಹೆಚ್ಚು ಮಹತ್ವ ಪಡೆದಿವೆ. “ಹಾಲು ಕೆಟ್ಟರೂ, ಹಾಲುಮತ ಕೆಡುವುದಿಲ್ಲ” ಎಂಬ ಮಾತು ಹಾಲುಮತ ಸಮುದಾಯಕ್ಕೆ ಸೇರಿದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವುದೇ ಕಂಟಕವಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಶ್ರೀಗಳು ತಮ್ಮ ಹಿಂದಿನ ಭವಿಷ್ಯಗಳನ್ನು ನೆನಪಿಸಿಕೊಂಡು, “ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಎದ್ದೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೋಳಾದೀತು” ಎಂದು ಹೇಳಿದ್ದರು. ಸಾಮೂಹಿಕ ಹತ್ಯೆ ನಡೆಯುತ್ತದೆ ಎಂದು ತಾವು ಹಿಂದೆ ನುಡಿದಿದ್ದ ಭವಿಷ್ಯವು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯ ರೂಪದಲ್ಲಿ ನಿಜವಾಗಿದೆ ಎಂದಿದ್ದಾರೆ.

ಅಲ್ಲದೆ, ಸುತ್ತುವರಿದು ಬಂದಾಗ ಜಗವೆಲ್ಲಾ ಕೋಳಾದೀತು ಎಂದರೆ, ಅಂತಹ ಕೃತ್ಯಗಳು ಜಗತ್ತಿನಾದ್ಯಂತ ಹರಡುತ್ತವೆ ಎಂದು ವಿವರಿಸಿದ್ದಾರೆ. ಮತೀಯ ಗಲಭೆಗಳು ಹೆಚ್ಚಾಗಿ ಜನರಲ್ಲಿ ಅಶಾಂತಿ ಮೂಡುತ್ತದೆ ಎಂಬ ತಮ್ಮ ಹಳೆಯ ನುಡಿಗಳನ್ನೂ ಶ್ರೀಗಳು ಸ್ಮರಿಸಿದ್ದಾರೆ.

ರಾಜಕೀಯ ವ್ಯವಸ್ಥೆಯ ಬಗ್ಗೆ ಮಾತನಾಡಿ, ಹಿಂದೆ ರಾಜರು, ಮಹಾರಾಜರು, ಚಕ್ರವರ್ತಿಗಳು ಗುರುಗಳಿಗೆ ವಿಶೇಷ ಸ್ಥಾನ ನೀಡಿ, ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುತ್ತಿದ್ದರು, ಆದರೆ ಈಗ ಆ ಪದ್ಧತಿ ಇಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. “ನಾವು ಸನ್ಯಾಸಿಗಳು, ಯಾವ ದೇಶದಲ್ಲಿ, ಯಾವ ಮಣ್ಣಿನಲ್ಲಿ ಇರುತ್ತೇವೆಯೋ, ಎಲ್ಲಿ ಅನ್ನ ತಿನ್ನುತ್ತೇವೆಯೋ ಅಲ್ಲಿಗೆ ಒಳ್ಳೆದಾಗಬೇಕು ಎಂದು ಪ್ರಾರ್ಥಿಸುತ್ತೇವೆ” ಎಂದಿದ್ದಾರೆ. ಅಕಾಲಿಕ ಮಳೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿ, ಸಕಾಲದಲ್ಲಿ ಮಳೆ ಬಾರದಿರಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

“ಹಾಲುಮತದವರ ಬಳಿ ಅಧಿಕಾರ ಇದ್ದರೆ, ಅದನ್ನು ವಾಪಸ್ ತೆಗೆದುಕೊಳ್ಳುವುದು ಕಷ್ಟ. ಅವರಾಗಿಯೇ ಕೊಟ್ಟರೆ ಬದಲಾಗಬಹುದೇ ಹೊರತು ಇಲ್ಲದಿದ್ದರೆ ಸಾಧ್ಯವಿಲ್ಲ” ಎಂದು ಕೋಡಿಮಠದ ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಸಿದ್ದರಾಮಯ್ಯನವರಿಗೆ ಯಾವುದೇ ಬಾಹ್ಯ ಶಕ್ತಿಗಳಿಂದ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಕಳೆದ ಬಾರಿ ಐದು ವರ್ಷಗಳ ಕಾಲ ಅವರನ್ನು ಯಾರೂ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂಬುದನ್ನು ಉಲ್ಲೇಖಿಸಿ, “ಅವರಾಗಿಯೇ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ” ಎಂದು ಪುನರುಚ್ಚರಿಸಿದ್ದಾರೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕಬುಕ್ಕರು, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಅವರಂತಹ ಮಹನೀಯರು ಹಾಲುಮತ ಸಮುದಾಯಕ್ಕೆ ಸೇರಿದವರು ಎಂದು ಶ್ರೀಗಳು ಹೇಳಿದ್ದಾರೆ.

“ಹಾಲುಮತ ಸಮಾಜದಲ್ಲಿ ಲೋಕೋತ್ತರ ಕಾಣಿಕೆಗಳು ಇದ್ದಾವೆ, ಅವರಿಗೆ ದೈವಬಲವಿದೆ. ಹಾಲುಮತ ಸಮಾಜಕ್ಕೆ ಘನತೆ, ಗೌರವವಿದೆ, ಅಧಿಕಾರ ಬಂದರೆ, ವಾಪಸ್ ತೆಗೆದುಕೊಳ್ಳುವುದು ಕಷ್ಟ” ಎಂದು ಹೇಳುವ ಮೂಲಕ, ಸಿದ್ದರಾಮಯ್ಯನವರ ಅಧಿಕಾರಾವಧಿ ಸುಭದ್ರವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಹೀಗಾಗಿ, ನವೆಂಬರ್ ಕ್ರಾಂತಿಯ ಭವಿಷ್ಯ ಸಿದ್ದರಾಮಯ್ಯನವರಿಗೆ ಅನ್ವಯಿಸುವುದಿಲ್ಲ ಎಂಬುದು ಶ್ರೀಗಳ ಪರೋಕ್ಷ ಹೇಳಿಕೆಯ ಸಾರಾಂಶವಾಗಿದೆ.

Previous articleಬೀರದೇವರ ಜಾತ್ರೆ: ಭಕ್ತರಿಂದ ಭಂಡಾರ ಸಮರ್ಪನೆ
Next articleಬೆಂಗಳೂರಿನ ಜನರಿಗೆ ಮಹಾ ದೋಖಾ: 5% ತೆರಿಗೆಯಿಂದ ಮಧ್ಯಮ ವರ್ಗವನ್ನು ಸುಟ್ಟು ಹಾಕುತ್ತಿದೆ ಸರ್ಕಾರ

LEAVE A REPLY

Please enter your comment!
Please enter your name here