ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಸಮೀಕ್ಷೆ) ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕರ ವೈಯಕ್ತಿಕ ಮಾಹಿತಿ ಗೌಪ್ಯತೆ ಕಾಪಾಡುವುದಾಗಿ ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಸರ್ಕಾರ ಉಲ್ಲಂಘಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ಫೋಸಿಸ್ ಮುಖ್ಯಸ್ಥರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಅವರ ಕುಟುಂಬದ ಮಾಹಿತಿ ಸೋರಿಕೆಯಾಗಿರುವುದು ಈ ಆರೋಪಕ್ಕೆ ಪುಷ್ಟಿ ನೀಡಿದೆ. ಸುಧಾಮೂರ್ತಿ “ನಾವು ಹಿಂದುಳಿದವರಲ್ಲ, ಮಾಹಿತಿ ನೀಡುವುದಿಲ್ಲ” ಎಂದು ಬರೆದಿದ್ದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾರಾಯಣ ಮೂರ್ತಿ, ಸುಧಾಮೂರ್ತಿಯವರೇನು ಬೃಹಸ್ಪತಿಗಳೇ? ಈ ಸಮೀಕ್ಷೆ ಹಿಂದುಳಿದವರಿಗೆ ಮಾತ್ರವಲ್ಲ” ಎಂದು ತಿರುಗೇಟು ನೀಡಿದ್ದರು. ಇನ್ನು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್, ಜಾತಿ ಸಮೀಕ್ಷೆಯಲ್ಲಿ ಭಾಗಿಯಾಗದವರು ದೇಶದ್ರೋಹಿಗಳು ಎಂದು ಹೇಳುವ ಮೂಲಕ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಆರ್. ಅಶೋಕ್ ಸರ್ಕಾರದ ಈ ನಡೆಯನ್ನು ನ್ಯಾಯಾಂಗ ನಿಂದನೆ ಎಂದು ಬಣ್ಣಿಸಿದ್ದಾರೆ. ಹೈಕೋರ್ಟ್ ಆದೇಶದಲ್ಲಿ “ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು” ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಕಳೆದ ಬಾರಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಗಳು ದನಿ ಎತ್ತಿದಾಗ, “ನಿಮ್ಮ ಸಿಎಸ್ಆರ್ ನಿಧಿಯಲ್ಲಿ ನೀವೇ ರಸ್ತೆಗುಂಡಿ ಮುಚ್ಚಿ” ಎಂದು ಅವಮಾನಿಸಿದ್ದ ಕಾಂಗ್ರೆಸ್ ನಾಯಕರು ಈಗ ಉದ್ಯಮಿಗಳ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡಿರುವುದು ಅವರ ದರ್ಪ ಮತ್ತು ದುರಹಂಕಾರವನ್ನು ತೋರಿಸುತ್ತದೆ ಎಂದು ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
“ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕತೆಗೆ ಶಕ್ತಿ ತುಂಬಿರುವ ಉದ್ಯಮಿಗಳನ್ನು ನಿಂದಿಸುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸರ್ಕಾರದ ಪಾರದರ್ಶಕತೆ ಮತ್ತು ನಾಗರಿಕರ ಖಾಸಗಿತನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯು ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೇರುವ ಸಾಧ್ಯತೆ ಇದೆ.
ಈ ಹಿಂದೆ ಜಯ ಪ್ರಕಾಶ್ ಹೆಗ್ಡೆ ಮತ್ತು ಕಾಂತರಾಜ್ ಅವರ ಆಯೋಗದ ಮೂಲಕ ನಡೆಸಿದ ಸಮೀಕ್ಷೆಗಳನ್ನು ಸರ್ಕಾರ ನಿಯಮಬಾಹಿರವಾಗಿ ತಿರಸ್ಕರಿಸಿದೆ. ಈ ಸಮೀಕ್ಷೆಗಳಿಂದ ರಾಜ್ಯದ ಬೊಕ್ಕಸಕ್ಕೆ ಕನಿಷ್ಠ 350 ರಿಂದ 400 ಕೋಟಿ ರೂಪಾಯಿಗಳ ವೆಚ್ಚ ಆಗಿರುತ್ತದೆ. ಆ ಸಮೀಕ್ಷೆಗಳು ವೈಜ್ಞಾನಿಕವಾಗಿರುವುದಿಲ್ಲ ಎಂದು ತಿರಸ್ಕರಿಸಿರುವುದು ನಾಚಿಕೆಗೇಡಿನ ವಿಚಾರ. ಏಕೆಂದರೆ ಸರ್ಕಾರವೇ ಆ ಸಮೀಕ್ಷೆಗಳನ್ನು ನಡೆಸಿರುತ್ತದೆ. ಈಗ ನಡೆಸುತ್ತಿರುವ ಸಮೀಕ್ಷೆಯನ್ನು ಸರ್ಕಾರ ಒಪ್ಪಿಕೊಂಡು ಜಾರಿ ಮಾಡುತ್ತದೆ ಎನ್ನುವ ನಂಬಿಕೆ ನಮಗಂತೂ ಇಲ್ಲ.ಆದ್ದರಿಂದ ನಾನು ಈ ಸಮೀಕ್ಷೆಗೆ ನನ್ನ ಮಾಹಿತಿಯನ್ನು ಕೊಟ್ಟಿರುವುದಿಲ್ಲ ಮತ್ತು ಇಂತಹ ಬೂಟಾಟಿಕೆ ಸಮೀಕ್ಷೆಗಳನ್ನು ಕಡಾ ಖಂಡಿತವಾಗಿ ಧಿಕ್ಕರಿಸುತ್ತೇನೆ.