ಚಿಕ್ಕೋಡಿ: ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದಲ್ಲಿ ನಕಲಿ ನೋಟು ಮುದ್ರಣ ಮತ್ತು ವಹಿವಾಟು ಮಾಡುತ್ತಿದ್ದ ಭಾರಿ ಗ್ಯಾಂಗ್ ಅನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಹಚ್ಚಿದ್ದು, ಸುಮಾರು ₹1 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ಈ ಕಾರ್ಯಚರಣೆ ಮಹಾರಾಷ್ಟ್ರದ ಮಿರಜ ನಗರದ ಗಾಂಧಿ ಚೌಕ ಪೊಲೀಸ್ ಠಾಣೆಯವರು ನಡೆಸಿದ್ದು, ದಾಳಿಯ ವೇಳೆ ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬರು ಸಂಚಾರ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ.
ಕಾರ್ಯಚರಣೆ ವಿವರ: ಮಹಾರಾಷ್ಟ್ರ ಪೊಲೀಸರು ಸ್ಥಳೀಯ ಸುಳಿವಿನ ಆಧಾರದ ಮೇಲೆ ಮಿರಜದ ಹೊರವಲಯದಲ್ಲಿರುವ ಮನೆಯಲ್ಲಿ ತೀವ್ರ ಪರಿಶೀಲನೆ ನಡೆಸಿದರು. ಅಲ್ಲಿ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪ್ರಿಂಟರ್, ಸ್ಕ್ಯಾನರ್, ಹೈ ಕ್ವಾಲಿಟಿ ಪೇಪರ್, ಶಾಯಿ, ಮತ್ತು ಡಿಸೈನ್ ಸಾಫ್ಟ್‌ವೇರ್‌ಗಳು ಪತ್ತೆಯಾದವು. ಜೊತೆಗೆ ನಕಲಿ ನೋಟುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಇನೋವಾ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪತ್ತೆಯಾದ ನೋಟುಗಳು: ಪೊಲೀಸರ ಪ್ರಕಾರ, ₹500 ಮತ್ತು ₹200 ಮುಖಬೆಲೆಯ ನೋಟುಗಳು ನಕಲಿ ರೂಪದಲ್ಲಿ ಮುದ್ರಿಸಲ್ಪಟ್ಟಿದ್ದು, ಒಟ್ಟು ಮೌಲ್ಯ ₹1 ಕೋಟಿ ರೂ. ಆಗಿದೆ. ನೋಟುಗಳ ಗುಣಮಟ್ಟ ಉತ್ತಮವಾಗಿರುವುದರಿಂದ, ಇವು ಬ್ಯಾಂಕ್‌ಗಳಲ್ಲಿ ಅಥವಾ ವ್ಯಾಪಾರ ವಹಿವಾಟಿನಲ್ಲಿ ಸುಲಭವಾಗಿ ಹರಡುವ ಸಾಧ್ಯತೆಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಿಚಾರಣೆ ಮುಂದುವರಿದಿದೆ: ಬಂಧಿತರಿಂದ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ, ನಕಲಿ ನೋಟು ಸರಬರಾಜು ಜಾಲವು ಕರ್ನಾಟಕದ ಗಡಿಯವರೆಗೆ ವಿಸ್ತರಿತವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈಗ ಗ್ಯಾಂಗ್‌ನ ಮುಖ್ಯ ಸರಬರಾಜುದಾರ ಮತ್ತು ನೋಟು ವಿನಿಮಯ ಶೃಂಖಲೆ ಕುರಿತು ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರ–ಕರ್ನಾಟಕ ಗಡಿಯ ತೀವ್ರ ನಿಗಾವಳಿ: ಈ ಘಟನೆಯ ಹಿನ್ನೆಲೆಯಲ್ಲಿ ಗಡಿ ಭಾಗದ ಪೋಲೀಸ್ ಠಾಣೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಚಿಕ್ಕೋಡಿ, ನಿಪ್ಪಾಣಿ ಹಾಗೂ ಕಾಗವಾಡ ಠಾಣಾ ವ್ಯಾಪ್ತಿಯಲ್ಲೂ ಕಾವಲು ಬಿಗಿಗೊಳಿಸಲಾಗಿದೆ. ಪೊಲೀಸ್ ವಲಯದವರು ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪ್ರಿಂಟರ್‌ಗಳ ಸಹಾಯದಿಂದ ನಕಲಿ ನೋಟು ಮುದ್ರಣದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಜನತೆ ನೋಟು ಸ್ವೀಕರಿಸುವಾಗ ಎಚ್ಚರಿಕೆ ವಹಿಸಲು ಪೊಲೀಸರ ಮನವಿ.