ಯೋಗೇಶ್ ಶ್ಯಾನುಭೋಗನಹಳ್ಳಿ
ಸಂ.ಕ.ಸಮಾಚಾರ, ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಿಲ್ಲೆಯ ರಾಜಕೀಯ ಜಿದ್ದಾಜಿದ್ದಿಗೂ ವೇದಿಕೆಯಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಯೋಜನೆ ಅನುಷ್ಠಾನ ಮಾಡುತ್ತೇವೆ. ಯಾವುದೇ ಯೋಜನೆಗೆ ವಿರೋಧ ಸಹಜ ಎಂದು ಹೇಳಿದ್ದಾರೆ.
ಇತ್ತ ಬಿಜೆಪಿ ಸಹ ಹೋರಾಟದ ಅಖಾಡಕ್ಕೆ ಧುಮುಕಿದ್ದು, ಯಾವುದೇ ಕಾರಣಕ್ಕೂ ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಪಟ್ಟುಹಿಡಿದು, ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸಾಗರದಲ್ಲಿ ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟದ ಸ್ಥಳಕ್ಕೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಯೋಜನೆಯು ಪಶ್ಚಿಮ ಘಟ್ಟದ ಪ್ರದೇಶಕ್ಕೆ ವ್ಯಾಪಕ ಹಾನಿ ಉಂಟು ಮಾಡುವುದರಿಂದ, ವಿಶಿಷ್ಟ ಜೀವ ವೈವಿಧ್ಯಗಳಿಗೆ ನಷ್ಟ ಹಾಗೂ ಪ್ರಮುಖ ಆವಾಸಸ್ಥಾನಗಳ ವಿಘಟನೆಗೆ ಕಾರಣವಾಗುವ ಆತಂಕ ಹೆಚ್ಚಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರು ಮತ್ತು ಇಲಾಖೆಯ ಜೊತೆ ಚರ್ಚೆ ಮಾಡುವುದಾಗಿ ಬಿ.ವೈ.ರಾಘವೇಂದ್ರ ಹೋರಾಟಗಾರರಿಗೆ ಹೇಳಿದ್ದಾರೆ.
ಪರ-ವಿರೋಧ ರಾಜಕೀಯ: ಆಡಳಿತ ಪಕ್ಷದ ನಾಯಕರು ಯೋಜನೆ ಸಮರ್ಥಿಸಿಕೊಂಡರೆ, ಬಿಜೆಪಿಯವರು ಯೋಜನೆ ವಿರೋಧಿಸಿ ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಯೋಜನೆಗೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವಿನ ಮಾತಿನ ಸಮರ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಗಳು ಇವೆ.
ನೆಲದ ಜನರ ನೋವು: ಶರಾವತಿ ಸಂತ್ರಸ್ತರ ಸಮಸ್ಯೆಗಳು ಇಂದಿಗೂ ಹಾಗೇ ಇವೆ. ಹಕ್ಕುಪತ್ರಕ್ಕಾಗಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮೊದಲಿನಿಂದಲೂ ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ.
ಇಂದಿಗೂ ಹಕ್ಕುಪತ್ರಕ್ಕಾಗಿ ಸಂತ್ರಸ್ತರು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ, ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಹಾಗಾಗಿ, ಸಹಜವಾಗಿಯೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಆ ಭಾಗದ ನೆಲೆದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ?
- 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ
- ಅಂದಾಜು 10,200 ಕೋಟಿ ರೂ. ವೆಚ್ಚ
- ಭೂಗತ ಜಲವಿದ್ಯುತ್ ಯೋಜನೆ
- ತಲಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ನಿರ್ಮಾಣ
- 120 ಎಕರೆ ಭೂಮಿಯ ಅವಶ್ಯಕತೆ
ಈ ಕುರಿತು ಮಾತನಾಡಿದ ದಿನೇಶ್ ಶಿರವಾಳ, ಅಧ್ಯಕ್ಷ, ಜಿಲ್ಲಾ ರೈತ ಸಂಘ, “ಬಿಜೆಪಿಯ ಸಂಸದರು, ಮಾಜಿ ಶಾಸಕರು ಹೋರಾಟಕ್ಕೆ ಬೆಂಬಲವನ್ನು ನೀಡಿದ್ದಾರೆ. ಅ.15ರಂದು ಸಾಗರದಲ್ಲಿ ಬಹಿರಂಗ ಸಭೆ ಮಾಡುತ್ತೇವೆ. ರಾಜ್ಯದ ಮೂಲೆ ಮೂಲೆಯಿಂದ ರೈತರು, ಹೋರಾಟಗಾರು ಬರುತ್ತಾರೆ. ಅಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರು ಇಲ್ಲಿಗೆ ಬಂದು, ಯೋಜನೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ಹೇಳಿದ್ದಾರೆ.