ಕದಂಬರ ಕಾಲದ ಕಾಡಿನ ದಂತಕಥೆ

0
151

ಗಣೇಶ್‌ ರಾಣಿಬೆನ್ನೂರು
ಕಾಡಿನೊಳಗಿನ ಕಥನ, ಕದನ ಎಂದೆಂದಿಗೂ ಕುತೂಹಲ ಎಂಬುದನ್ನು ಅರಿತಿರುವ ರಿಷಬ್ ಶೆಟ್ಟಿ, ಈಗಾಗಲೇ ಕಾಂತಾರ' ಮೂಲಕದಂತಕಥೆ’ಯೊಂದನ್ನು ತೆರೆದಿಟ್ಟಿದ್ದರು. ಪುಟ್ಟದೊಂದು ಊರು, ಅಲ್ಲಿನ ಧಣಿಗಳು, ಮೈಲಿಗೆ, ಕಾಡಿನ ಸಂಪತ್ತು, ಅದರ ಮೇಲೆ ಧನಿಕರ ಕಣ್ಣು, ಪೊಲೀಸರ ಅಧಿಕಾರ ದರ್ಪ, ಕಾಡು ಜನರ ಒಗ್ಗಟ್ಟು, ದೈವ, ನಂಬಿಕೆ, ರಾಜರು ದೈವವನ್ನು ಕೇಳುವುದು… ಹೀಗೆ ಅನೇಕ ವಿಷಯಗಳು `ಕಾಂತಾರ’ದ ಮೂಲಕ ದರ್ಶನವಾಗಿತ್ತು.

ಅದೇ ನಿರೀಕ್ಷೆಗಳೊಂದಿಗೆ ಕಾಂತಾರದ ಮತ್ತೊಂದುಅಧ್ಯಾಯ ನೋಡಲು ಶುರುವಿಟ್ಟುಕೊಂಡರೆ ಮತ್ತದೇ ಕಾಡಿನ ದರ್ಶನವಾಗುತ್ತದೆ. ಈ ಕಾಡಿನ ವಿಸ್ತೀರ್ಣ, ದಟ್ಟತೆಗೆ ಮಿತಿಯಿಲ್ಲ. ಅಲ್ಲಿನ ಸಂಪತ್ತು ಸಹ ಅಷ್ಟೇ ಶ್ರೀಮಂತಿಕೆಯಿಂದ ಕೂಡಿದೆ. ಹೀಗಾಗಿ ಅದರ ಮೇಲೆ ಎಲ್ಲರ ಕಣ್ಣು. ಕದಂಬರ ಕಾಲದ ಹಿನ್ನೆಲೆಯಲ್ಲಿ ತೆರೆದುಕೊಳ್ಳು ಕಥೆ, ಆರಂಭದಲ್ಲೇ ವಿಷಯ' ಏನೆಂಬುದನ್ನು ಸಂಕ್ಷಿಪ್ತವಾಗಿ ಹೇಳಿಯೇ ಅಸಲಿ ಕಥೆ ಶುರು ಮಾಡುತ್ತಾರೆ ರಿಷಬ್.ನಾನು ಬಂದಿದ್ದು ಕೊಂಚ ತಡವಾಯ್ತಾ…’ ಎಂದು ಸಿನಿಮಾ ಶುರುವಾದ ಕೆಲವು ನಿಮಿಷಗಳ ಬಳಿಕ ನಾಯಕನ ದರ್ಶನವಾಗುತ್ತದೆ. ಅಷ್ಟರೊಳಗೆ ಕಾಡಿನ ಆಳ-ಅಗಲದ ಪರಿಚಯವಾಗಿರುತ್ತದೆ.

ಇಲ್ಲಿ ಕಾಡಿನ ಜನರ ಕಥೆಯೊಂದಿಗೆ ರಾಜರ ಕಥೆಯಿದೆ… ವ್ಯಥೆಯಿದೆ. ತುಳು ಪಾಡ್ದನದಲ್ಲಿ ಬರುವ ಈಶ್ವರ ದೇವರ ಹೂದೋಟ, ಪಂಜುರ್ಲಿ ದೈವಗಳು ಹಿಂದಿನ ಕಾಂತಾರ'ದಲ್ಲಿತ್ತು. ಇಲ್ಲಿಯೂ ಅದು ಮೈದಳೆದಿವೆ. ಇಲ್ಲಿ ತುಸು ಶ್ರೀಮಂತಿಕೆಯಿಂದ ಮತ್ತಷ್ಟು ಕಂಗೊಳಿಸಿವೆ. ನಾಗ ಬೆರ್ಮ, ಚಾವುಂಡಿ, ಹುಲಿ ದೈವ, ಬ್ರಹ್ಮರಕ್ಕಸ ಇತ್ಯಾದಿಗಳುಕಾಂತಾರ-1’ನಲ್ಲಿ ಬೋನಸ್..!

ತುಳು ಭಾಷೆಯನ್ನು ಸಂದರ್ಭೋಚಿತವಾಗಿ ಬಳಸಲಾಗಿದೆ. ಪಾಡ್ದನಗಳು ದೈವದ ಕಥೆಯನ್ನು ಹಿನ್ನಲೆಯಲ್ಲಿ ಹೇಳುತ್ತಾ ಕಥೆಯ ಸಾರವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ರಿಷಬ್. ತುಳು ದೈವಾರಾಧನೆ, ಗುಳಿಗ ದೈವ ಹಾಗೂ ಅಂದಿನ ಜನಜೀವನ ಕಥೆಯಲ್ಲಿ ಮಿಳಿತವಾಗಿದೆಯಾದರೂ, ಕೆಲವು ಸನ್ನಿವೇಶಗಳು ಬಾಹುಬಲಿ, ಆರ್.ಆರ್.ಆರ್ ಹಾಗೂ ಹಾಲಿವುಡ್‌ನ ಕೆಲವು ಸಿನಿಮಾಗಳಿಂದ `ಸ್ಫೂರ್ತಿ’ ಪಡೆದಿರುವುದು ಕಾಣಸಿಗುತ್ತದೆ.

ಕಾಮಿಡಿಯನ್ನು ಹೆಚ್ಚಾಗಿ ನಿರೀಕ್ಷಿಸುವವರಿಗೆ ಇಲ್ಲಿ ಕೊಂಚ ನಿರಾಸೆಯಾಗುವ ಸಂಭವವಿದೆ. ಯಾಕೆಂದರೆ ಅದಕ್ಕಿಂತ ಹೆಚ್ಚು ಈ ಬಾರಿ ಆ್ಯಕ್ಷನ್‌ನತ್ತ ಗಮನ ಹರಿಸಿದ್ದಾರೆ ರಿಷಬ್. ಹಾಗೆ ನೋಡಿದರೆ ಮೇಕಿಂಗ್ ಇಲ್ಲಿ ಮಾತನಾಡಿದೆ. ಹೀಗಾಗಿ ಕಥೆಯ ವಿಷಯದಲ್ಲಿ ಸೊರಗಿದೆ. ಮತ್ತಷ್ಟು ಕಥೆ-ಚಿತ್ರಕಥೆಯತ್ತ ಗಮನ ಹರಿಸಿದ್ದರೆ `ಕಾಂತಾರ’ದ ಮಿಂಚಿನಲ್ಲಿ ಮತ್ತಷ್ಟು ಬೆಳಕು ಕಾಣುವ ಸಾಧ್ಯತೆಗಳಿದ್ದವು.

ಕಥೆ, ಕಾಮಿಡಿ, ಹಾಡುಗಳ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳದಿದ್ದರೆ… ಅದ್ಧೂರಿ ಮೇಕಿಂಗ್, ಆ್ಯಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ. ಮಣ್ಣಿನ ಸೊಗಡು ಸಿನಿಮಾದಲ್ಲಿದೆಯಾದರೂ ಅದನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿಕೊಡುವತ್ತ ಮತ್ತಷ್ಟು ಕಾಳಜಿ ವಹಿಸಬಹುದಿತ್ತು. ಇನ್ನು ಅಜನೀಶ್ ಲೋಕನಾಥ್ ಹಳೆಯ ಕಾಂತಾರ'ದ ಎರಡು ಹಾಡುಗಳು ಹಾಗೂ ಕೆಲವು ಹಿನ್ನೆಲೆ ಸಂಗೀತವನ್ನು ಇಲ್ಲೂ ಮುಂದುವರಿಸಿದ್ದಾರೆ. ಕೆಲವೆಡೆ ದೃಶ್ಯವೈಭವಕ್ಕಿಂತ ಬ್ಯಾಕ್‌ಗ್ರೌಂಡ್ಸದ್ದು’ ಮಾಡುತ್ತದೆ. ಇಡೀ ಸಿನಿಮಾದಲ್ಲಿ ಹೆಚ್ಚಾಗಿ ಕಾಣಿಸುವುದು ರಿಷಬ್ ಶೆಟ್ಟಿ… ರಿಷಬ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಮಾತ್ರ..!! ಕನಕವತಿಯಾಗಿ ರುಕ್ಮಿಣಿ ವಸಂತ್, ಕುಲಶೇಖರ ಪಾತ್ರದಲ್ಲಿ ಗುಲ್ಶನ್ ದೇವಯ್ಯ ಆಗಾಗ ಗಮನ ಸೆಳೆಯುತ್ತಾರೆ.

ತಾಂತ್ರಿಕವಾಗಿ ಗಮನ ಸೆಳೆಯುವುದು ಕಲಾ ನಿರ್ದೇಶನ ಮತ್ತು ಛಾಯಾಗ್ರಹಣ. ಪಶ್ಚಿಮ ಘಟ್ಟದ ಕಾಡಿನ ರಮಣೀಯತೆಯನ್ನು ಅರವಿಂದ್ ಕಶ್ಯಪ್ ಅದ್ಬುತವಾಗಿ ಸೆರೆ ಹಿಡಿರುವುದು ಚಿತ್ರದ ಪ್ಲಸ್ ಪಾಯಿಂಟ್‌ಗಳಲ್ಲೊಂದು.

ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಕಾಂತಾರ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಾಪ್ಟರ್ 1' ವಿಶ್ವಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬರೋಬ್ಬರಿ 7000 ಪ್ಲಸ್ ಪರದೆಗಳಲ್ಲಿ ಬಿಡುಗಡೆಯಾಗಿದ್ದಕಾಂತಾರ’ಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ದೊರಕಿದೆ. ಭಾರತ ಸೇರಿದಂತೆ ವಿದೇಶಗಳಲ್ಲೂ ಕಮಾಲ್ ಮಾಡಿರುವ ಕಾಂತಾರ'ದ ಗಳಿಕೆ ಮೊದಲ ದಿನವೇ 100 ಕೋಟಿ ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಕಾಂತಾರ’ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರ ಗೆಲುವು ಕಾಂತಾರ 1' ಸಿನಿಮಾಕ್ಕೆ ಸಾಕಷ್ಟು ಉಪಯೋಗವಾಗಿದೆ. ಅ. 1ರಂದೇ ಸಾಕಷ್ಟು ಕಡೆ ಪ್ರೀಮಿಯರ್ ಪ್ರದರ್ಶನ ಕಂಡಿರುವಕಾಂತಾರ 1′, ಅ. 2ರಂದು ಎಲ್ಲೆಡೆ ನಿರೀಕ್ಷಿತ ಓಪನಿಂಗ್ ಪಡೆದುಕೊಂಡಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ `ಕಾಂತಾರ-1′ ತೆರೆಕಂಡಿದೆ.

Previous articleಬಿಹಾರದಲ್ಲಿ ವಂದೇ ಭಾರತ್ ದುರಂತ: ರೈಲ್ವೆ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು!
Next article“ಡಿಂಪಲ್ ಕ್ವೀನ್”ಗೆ “ಲ್ಯಾಂಡ್ ಲಾರ್ಡ್” ಕೊಡುಗೆ

LEAVE A REPLY

Please enter your comment!
Please enter your name here