ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಕಾಂತಾರ ಈಗಾಗಲೇ ದೇಶ–ವಿದೇಶಗಳಲ್ಲಿ ವಿಶಾಲ ಮೆಚ್ಚುಗೆ ಗಳಿಸಿದ್ದಲ್ಲದೆ ರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿತ್ತು. ಈಗ ಅದರ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯ ಹಿನ್ನಲೆಯಲ್ಲಿ ಭಾರತೀಯ ಅಂಚೆ ಇಲಾಖೆ (India Post) ಚಿತ್ರದ ತಂಡಕ್ಕೆ ವಿಶೇಷ ಗೌರವ ಸಲ್ಲಿಸಿದೆ.
ವಿಶೇಷ ಅಂಚೆ ಲಕೋಟೆ ಬಿಡುಗಡೆ: ಭಾರತೀಯ ಅಂಚೆ ಇಲಾಖೆ ಅಧಿಕೃತವಾಗಿ ವಿಶೇಷ ಅಂಚೆ ಲಕೋಟೆಯನ್ನು (Special Postal Cover) ಬಿಡುಗಡೆ ಮಾಡಿದ್ದು, ಇದು ಕಾಂತಾರ ಸಿನಿಮಾದ ಸಾಧನೆ ಹಾಗೂ ಕನ್ನಡ ಸಂಸ್ಕೃತಿಗೆ ಸಲ್ಲಿಸಿರುವ ಗೌರವವನ್ನು ಮತ್ತಷ್ಟು ಉಜ್ವಲಗೊಳಿಸಿದೆ. ಈ ಲಕೋಟೆಯ ಮೂಲಕ ಚಿತ್ರರಂಗದ ಜೊತೆಗೆ ಕರ್ನಾಟಕದ ಜನಪದ ಪರಂಪರೆಗೂ ಗೌರವ ವ್ಯಕ್ತಪಡಿಸಲಾಗಿದೆ.
‘ಕಾಂತಾರ’ ಸಿನಿಮಾದ ಸಾಧನೆ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಅಪಾರ ಮೆಚ್ಚುಗೆ ಪಡೆದಿತ್ತು. ಕನ್ನಡ ನಾಡಿನ ಭೂತಾರಾಧನೆ, ದೈವ ಸಂಪ್ರದಾಯ ಮತ್ತು ಕಾಡು–ಮನುಷ್ಯ ಸಂಬಂಧದ ಆಳವಾದ ಕಥೆಯನ್ನು ಬಿಂಬಿಸಿದ ಕಾರಣದಿಂದ ಇದು ವಿಶೇಷ ಚಿತ್ರವಾಗಿ ಗುರುತಿಸಿಕೊಂಡಿತ್ತು.
ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಮಾಡಿದಲ್ಲದೆ. ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಗಳಿಸಿತ್ತು. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೂ ಭಾಜನವಾಗಿತ್ತು.
ಪ್ರೀಕ್ವೆಲ್ ನಿರೀಕ್ಷೆ ಹೆಚ್ಚಿಸಿದ ‘ಚಾಪ್ಟರ್ 1’: ಈಗ ಬಿಡುಗಡೆಯಾಗುತ್ತಿರುವ ಕಾಂತಾರ: ಚಾಪ್ಟರ್ 1 ಪ್ರೀಕ್ವೆಲ್ ಆಗಿ ಬರುವುದರಿಂದ ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಿಸಿದೆ. ಮೂಲ ಚಿತ್ರದ ಕಥಾಹಂದರಕ್ಕೂ ಮುಂಚಿನ ಪೀಳಿಗೆಯ ಕಥೆಯನ್ನು ಒಳಗೊಂಡಿರುವ ಈ ಭಾಗವು ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸಾಂಸ್ಕೃತಿಕ ಗೌರವ: ಭಾರತೀಯ ಅಂಚೆ ಇಲಾಖೆಯ ಈ ಕ್ರಮವು ಕೇವಲ ಸಿನಿಮಾಗೆ ಮಾತ್ರವಲ್ಲ, ಕನ್ನಡ ನಾಡಿನ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಗೆ ಸಲ್ಲಿಸಿದ ವಿಶಿಷ್ಟ ಗೌರವವಾಗಿದೆ. ಕನ್ನಡ ಚಲನಚಿತ್ರಕ್ಕೆ ಅಂಚೆ ಇಲಾಖೆಯ ಮಟ್ಟದಲ್ಲಿ ಸಿಕ್ಕಿರುವ ಈ ಮಾನ್ಯತೆ ಕನ್ನಡಿಗರಲ್ಲಿ ಹೆಮ್ಮೆಯ ವಿಷಯವಾಗಿದೆ.