ಅಬುಧಾಬಿ: ಸೋಲಿನಿಂದ ಕಂಗೆಟ್ಟಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4ನಲ್ಲಿ ಮುಖಾಮುಖಿಯಾಗಲಿವೆ.
ಗುಂಪು ಹಂತದಲ್ಲಿ ಸೋಲದ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಸೂಪರ್ 4ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಬಾಂಗ್ಲಾ ವಿರುದ್ಧ ಸೋತಿದ್ದರೂ ಧೃತಿಗೆಡದೇ ಮುಂದಿನ ಪಂದ್ಯಗಳನ್ನು ಎದುರಿಸಲು ಲಂಕಾ ಪಡೆ ಸಜ್ಜಾಗಿದೆ. ಇನ್ನು ಪಾಕಿಸ್ತಾನ ತಂಡ ಭಾರತ ಕ್ರಿಕೆಟ್ ತಂಡದ ವಿರುದ್ಧ ಸತತ ಎರಡನೇ ಬಾರಿ ಸೋತು ಭಾರೀ ಮುಖಭಂಗ ಅನುಭವಿಸಿದೆ.
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಅಂಕಪಟ್ಟಿಯಲ್ಲಿ ತಲಾ 2 ಅಂಕಗಳನ್ನು ಸಂಪಾದಿಸಿವೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಮೂರು ಮತ್ತು ನಾಲ್ಕನೆ ಸ್ಥಾನ ಪಡೆದಿವೆ.
ಪಾಕ್ ತಂಡದ ನಾಯಕ ಸಲ್ಮಾನ್ ಅಘಾ ಲಂಕಾ ವಿರುದ್ಧ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದ್ದಾರೆ.
ತಂಡದ ಪ್ರಮುಖ ಆಟಗಾರರಾದ ಬಾಬರ್ ಅಜಂ ಮತ್ತು ರಿಜ್ವಾನ್ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಭಾರತ ವಿರುದ್ಧ ಫಾರ್ಹನ್, ಸೈಮ್ ಆಯುಬ್ ಮತ್ತು ಫಾಕರ್ ಜಾಮನ್ ಉತ್ತಮ ಆರಂಭ ನೀಡಿ ಗಮನ ಸೆಳೆದಿದ್ದರು. ಆದರೆ ಪಾಕ್ ಬ್ಯಾಟರ್‌ಗಳು ಒತ್ತಡವನ್ನು ನಿಭಾಯಿಸುವುದರಲ್ಲಿ ವಿಫಲರಾಗುತ್ತಿದ್ದಾರೆ.
ಇನ್ನು ಶ್ರೀಲಂಕಾ ತಂಡದಲ್ಲಿ ಮಧ್ಯಮ ಕ್ರಮಾಂಕ ಮತ್ತೆ ಮತ್ತೆ ವೈಫಲ್ಯ ಅನುಭವಿಸುತ್ತಿದೆ. ಬೌಲಿಂಗ್‌ನಲ್ಲಿ ನುವಾನ್ ತುಷರಾ ಗಮನ ಸೆಳೆದಿದ್ದಾರೆ. ಸ್ಪಿನ್ ವಿಭಾಗದಲ್ಲಿ ವನಿಂದು ಹಸರಂಗ, ಚಾಮೀರಾ, ಚರಿತ್ ಅಸಲಂಕಾ ಸ್ಪಿನ್ ಮ್ಯಾಜಿಕ್ ಮಾಡಿ ತಂಡಕ್ಕೆ ನೆರವಾಗಿದ್ದಾರೆ.
ಶ್ರೀಲಂಕಾ ಸಂಭಾವ್ಯ ತಂಡ: ಪಾತುಮ್ ನಿಸ್ಸಂಕಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಕಮಿಲ್ ಮಿಶಾರ, ಕುಸಲ್ ಪೆರೆರಾ, ಚರಿತ್ ಅಸಲಂಕಾ (ನಾಯಕ), ದಾಸುನ್ ಶನಕ, ಕಮಿಂಡು ಮೆಂಡಿಸ್, ವನಿಂದು ಹಸರಂಗ, ಮಥಿಸಾ ಪತಿರಾನ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ ಮತ್ತು ನುವಾನ್ ತುಷಾರ.
ಪಾಕಿಸ್ತಾನ್ ಸಂಭಾವ್ಯ ತಂಡ: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್, ಸಲ್ಮಾನ್ ಆಘಾ (ನಾಯಕ), ಹಸನ್ ನವಾಜ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಅಬ್ರಾರ್ ಅಹ್ಮದ್.