ಹುಬ್ಬಳ್ಳಿ: ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ನಮೂದಿಸಬೇಕು ಎಂದು ಸಮಸ್ತ ಲಿಂಗಾಯತರಿಗೆ ಕರೆ ಕೊಡುವ ಉದ್ದೇಶದಿಂದ `ವೀರಶೈವ ಲಿಂಗಾಯತ ಏಕತಾ ರ‍್ಯಾಲಿ’ ಶುಕ್ರವಾರ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಲಿದೆ.
ಗುರು – ವಿರಕ್ತರಿಬ್ಬರೂ ಒಂದೇ ವೇದಿಕೆಯಲ್ಲಿ ಸೇರಲಿರುವ ರ‍್ಯಾಲಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ವಿರಕ್ತ ಪರಂಪರೆಯ ಸ್ವಾಮೀಜಿಗಳು ಏರ್ಪಡಿಸಿರುವ ಸಮಾವೇಶದಲ್ಲಿ ಪಂಚಾಚಾರ್ಯರು, ವೀರಶೈವ ಮಹಾಸಭೆಯ ಪ್ರಮುಖ ಪದಾಧಿಕಾರಿಗಳು, ವಿರಕ್ತ ಪರಂಪರೆಯ ಮಠಾಧೀಶರು, ರಾಜಕೀಯ ಕ್ಷೇತ್ರಗಳ ಗಣ್ಯರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎನ್ನುವ ಅಂಶದ ಬಗ್ಗೆ ಸಮುದಾಯದಲ್ಲಿ ಹಲವಾರು ಭಿನ್ನ ಧ್ವನಿಗಳು ಈಗ ಕೇಳಿ ಬರುತ್ತಿವೆ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಈಗಾಗಲೇ ನಡೆದಿರುವ ಅನೇಕ ಉಪ ಜಾತಿಗಳ ಸಭೆಗಳಲ್ಲಿ `ಹಿಂದೂ’ ಎಂದು ಬರೆಸುವ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದಿವೆ.
ಪ್ರತಿಪಕ್ಷ ಬಿಜೆಪಿಯ ವೀರಶೈವ – ಲಿಂಗಾಯತ ನಾಯಕರು `ಧರ್ಮದ ಕಾಲಂನಲ್ಲಿ ಹಿಂದೂ ಎಂಬುದಾಗಿ ಬರೆಸಿ; ಜಾತಿ – ಉಪಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂಬುದಾಗಿ ಬರೆಸಿ’ ಎಂದು ಸೂಚಿಸಿದ್ದಾರೆ. ಪಕ್ಷದ ಈ ತೀರ್ಮಾನವನ್ನು ಹುಬ್ಬಳ್ಳಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ವಿವರಿಸಿದ್ದಾರೆ. ಬಿಜೆಪಿಯ ಇತರ ಲಿಂಗಾಯತ ನಾಯಕರೂ ಈ ಅಂಶದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ.
ಆದರೆ ಸಮಾಜ ಬಾಂಧವರಲ್ಲಿ ಈ ಬಗ್ಗೆ ಇನ್ನೂ ಒಮ್ಮತದ ಭಾವನೆ ಮೂಡಿಲ್ಲ. ಹೀಗಾಗಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸದೇ ಇದ್ದವರು `ಇತರೇ’ ಎಂಬುದಾಗಿ (ಇತರೆಗೆ ಬೇರೆ ಕಾಲಂ ಇದೆ) ನಮೂದಿಸಬೇಕು ಎನ್ನುವ ಚರ್ಚೆಯೂ ರ‍್ಯಾಲಿಯ ಪೂರ್ವದಲ್ಲಿ ಜೋರಾಗಿ ನಡೆದಿದೆ.
ಈ ನಡುವೆ ಪ್ರಬಲ ಪಂಚಮಸಾಲಿ ಸಮುದಾಯದ ಸಭೆಗಳು ಕ್ರಮವಾಗಿ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ (ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ) ನಡೆದಿವೆ. ಧರ್ಮದ ಕಾಲಂನಲ್ಲಿ ಹಿಂದೂ ಎಂಬುದಾಗಿ ನಮೂದಿಸಬೇಕು; ಜಾತಿ - ಉಪಜಾತಿಯ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂಬುದಾಗಿ ಬರೆಸಬೇಕು' ಎನ್ನುವ ಮಾತು ಕೇಳಿ ಬಂದಿದೆ. ಆದರೆ ಹಿಂದೂ ಎಂದು ಬರೆಸುವುದಕ್ಕೆ ಈ ಎರಡೂ ಸಭೆಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿ,
ಇತರೇ ಎಂದು ಬರೆಸಿದರೆ ಸಾಂವಿಧಾನಿಕವಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ದೊರೆಯುತ್ತದೆ’ ಎನ್ನುವ ವಾದ ಕೇಳಿ ಬಂದಿದೆ.
ಈ ನಡುವೆ ಲಿಂಗಾಯತರ ಇನ್ನೊಂದು ಪ್ರಬಲ ಸಮುದಾಯವಾಗಿರುವ ರಡ್ಡಿ ಲಿಂಗಾಯತ ನಾಯಕರು `ರಡ್ಡಿ ಲಿಂಗಾಯತ’ ಎಂದೇ ಬರೆಸುವಂತೆ ಜಾಹೀರಾತುಗಳ ಮೂಲಕ ಈ ಉಪ ಜಾತಿಯ ಸಮುದಾಯದವರಿಗೆ ಕರೆ ನೀಡಿದ್ದಾರೆ.
ಇದೆಲ್ಲದವರ ಹಿನ್ನೆಲೆಯಲ್ಲಿ ಶುಕ್ರವಾರದ `ವೀರಶೈವ ಲಿಂಗಾಯತ ಏಕತಾ ರ‍್ಯಾಲಿ’ ಮಹತ್ವ ಪಡೆದುಕೊಂಡಿದ್ದು, ಯಾವ ನಿರ್ಣಯಕ್ಕೆ ಬರಲಿದೆ ಎನ್ನುವ ಕುತೂಹಲ ಮೂಡಿದೆ. ಎಂಟು ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ರಾಜ್ಯ ಮಟ್ಟದ ಭಾರೀ ರ‍್ಯಾಲಿ ನಡೆದುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.