ಬಿಡದಿ ಟೌನ್ ಶಿಪ್ ಯೋಜನೆ. ಸದ್ಯ ಬೆಂಗಳೂರು ನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಚರ್ಚೆಯಲ್ಲಿರುವ ವಿಚಾರ. ಆದರೆ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆ ಇದಾಗಿದೆ.
ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಚಳವಳಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪಾಲ್ಗೊಂಡಿದ್ದರು. “ಕಾಂಗ್ರೆಸ್ ನವರು ಕೂಪನ್ ಕೊಟ್ಟ ರೈತರನ್ನು ಕೂಪಕ್ಕೆ ತಳ್ಳುತ್ತಿದೆ. ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರು ಪರ್ಸೆಂಟ್ ಗ್ಯಾರಂಟಿ. ಆನಂತರ ಬಿಡದಿ ಟೌನ್ ಶಿಪ್ ಯೋಜನೆ ರದ್ದು ಮಾಡುತ್ತೇವೆ” ಎಂದು ಆರ್.ಅಶೋಕ ಹೇಳಿದರು.
ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, “ಗ್ರೇಟರ್ ಬೆಂಗಳೂರು ಹೆಸರಲ್ಲಿ ಹಳ್ಳ ತೋಡಿದರು. ರಾಮನ ಹೆಸರು ತೆಗೆದು ಬೆಂಗಳೂರು ಮಾಡಿದರು. ಇದರಿಂದ ಜನರ ಬದುಕೇನು ಬದಲಾವಣೆ ಆಗಿಲ್ಲ. 2006ರ ಬಿಡದಿ ಟೌನ್ ಶಿಪ್ ಯೋಜನೆಗೆ ಅಸ್ತಿತ್ವವೇ ಇಲ್ಲ. ಆ ಹೆಸರಿನಲ್ಲಿ ಭೂಮಿ ಕಬಳಿಸಲು ಮುಂದಾಗಿದ್ದಾರೆ. ಧರ್ಮಸ್ಥಳದಲ್ಲಿ ಬುರುಡೆ ಬಿಟ್ಟಂತೆ ಇಲ್ಲಿಯೂ ಬುರುಡೆ ಬಿಡುತ್ತಿದ್ದಾರೆ” ಎಂದು
ಕಿಡಿಕಾರಿದರು.
“ಬೆಂಗಳೂರಿನಲ್ಲಿ 8 ಲಕ್ಷ ಪ್ಲಾಟ್‌ಗಳು, ಲಕ್ಷಾಂತರ ನಿವೇಶನಗಳು ಖಾಲಿ ಇವೆ. ಕೆಎಚ್‌ಬಿ ಅವರು ನಿರ್ಮಿಸಿರುವ ಶೇ.80ರಷ್ಟು ನಿವೇಶನಗಳು ಖಾಲಿಯಿದ್ದು, ಯಾರು ಸಹ ಮನೆ ಕಟ್ಟಿಲ್ಲ. ಅಲ್ಲಿರುವ ಹೊಸ ಬಡಾವಣೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಫಲವತ್ತಾದ ಭೂಮಿಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಿ ಏನು ಮಾಡುತ್ತೀರಿ?” ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, “ಯಾವುದೇ ನೀರಾವರಿ ಜಮೀನನ್ನು ಕೈಗಾರಿಕೆ, ಮನೆ ನಿರ್ಮಾಣ ಸೇರಿದಂತೆ ಅನ್ಯ ಉದ್ದೇಶಗಳಿಗೆ ವರ್ಗಾಯಿಸಲು ಕಾನೂನಿನಲ್ಲಿ ಸಾಧ್ಯವೇ ಇಲ್ಲ. ಆದರೂ ಸರ್ಕಾರವೇ ತಪ್ಪು ಮಾಡಲು ಹೊರಟಿದೆ. ಇದೊಂದು ರೈತ ವಿರೋಧಿ ಸರ್ಕಾರ” ಎಂದು ಟೀಕಿಸಿದರು.
“ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 2013ರ ಭೂ ಸ್ವಾಧೀನ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಅದನ್ನು ಬಿಟ್ಟು ರೈತರ ಜೊತೆ ಹುಡುಗಾಟ ಆಡುತ್ತಿದೆ. ನಾವೆಲ್ಲರೂ ಯಾವುದೇ ಸ್ವಾರ್ಥವಿಲ್ಲದೆ ಜನರೊಟ್ಟಿಗಿದ್ದು ನ್ಯಾಯ ಕೊಡಿಸಲು ಬಂದಿದ್ದೇವೆ. ಎಲ್ಲಿವರೆಗೆ ಸರ್ಕಾರ ಮಣಿಯುವುದಿಲ್ಲವೊ ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ” ಎಂದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, “ರೈತರನ್ನು ಒಕ್ಕಲೆಬ್ಬಿಸುವುದು ಭೂ ತಾಯಿಗೆ ಮಾಡುವ ಅನ್ಯಾಯ. ಕುಮಾರಸ್ವಾಮಿ ಈ ಯೋಜನೆಗೆ ಚಾಲನೆ ಕೊಟ್ಟರು. ಆದರೆ, ಯೋಜನೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಕಾರಣಕ್ಕೆ ಕೈ ಬಿಟ್ಟರು. ಹಾಗಾಗಿ ರಾಜ್ಯ ಸರ್ಕಾರವೂ ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈ ಬಿಡಬೇಕು. ಇಲ್ಲದಿದ್ದರೆ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಯಲಿದೆ” ಎಂದು ಹೇಳಿದರು.
ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿ, “ಈ ಭಾಗದ ಭೂಮಿಯನ್ನು ಖರೀದಿ ಮಾಡಿರುವವರು ಅವರ ಹಿಂಬಾಲಕರಾಗಿದ್ದಾರೆ. ಇದರ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ ಹುನ್ನಾರವಿದೆ. ಭೂ ಸ್ವಾಧೀನದಿಂದ ಎರಡು ಗ್ರಾಮ ಪಂಚಾಯಿತಿಗಳ ಹೈನುಗಾರಿಕೆ, ಪರಿಸರ, ರೈತರ ಬದುಕಿಗೆ ಧಕ್ಕೆ ಆಗುತ್ತದೆ. ಆದ್ದರಿಂದ ವಿರೋಧ ಪಕ್ಷವು ಸರ್ಕಾರವನ್ನು ಎಚ್ಚರಿಸುವ ಮೂಲಕ ರೈತರಿಗೆ ನ್ಯಾಯ ಕೊಡಿಸಬೇಕಿದೆ” ಎಂದು ಹೇಳಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆದ ಚಳವಳಿ ವೇಳೆ ಇಬ್ಬರು ರೈತ ಮಹಿಳೆ ಸೇರಿದಂತೆ ಮೂವರು ರೈತರು ವಿಷ ಸೇವಿಸಲು ವಿಫಲ ಯತ್ನ ನಡೆಸಿದ ಘಟನೆ ಜರುಗಿತು. ಕೂಡಲೇ ಅವರನ್ನು ಸ್ಥಳೀಯ ಬೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಯಿತು.