ಧಾರವಾಡ ಕೃಷಿ ಮೇಳ: ರೈತರಿಗೆ ಗುಣಮಟ್ಟದ ಬೀಜ, ನೂತನ ತಂತ್ರಜ್ಞಾನ ದೊರಕಿಸುವುದು ಅವಶ್ಯ

0
5

ಧಾರವಾಡ: ಮಳೆಯಾಧಾರಿತ ಕೃಷಿ ಅವಲಂಬಿತರಿಗೆ ಗುಣಮಟ್ಟದ ಬೀಜ, ನೂತನ ತಂತ್ರಜ್ಞಾನ ದೊರಕಿಸುವುದು ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳವನ್ನು ಸೋಮವಾರ ಉದ್ಘಾಟಿಸಿ, ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಶೇ. 40ರಷ್ಟು ನೀರಾವರಿ ಆಧಾರಿತ ಕೃಷಿಯಿದ್ದು, ಶೇ. 60ರಷ್ಟು ರೈತರು ಮಳೆಯಾಶ್ರಯಿತ ಒಕ್ಕಲುತನ ಮಾಡುತ್ತಿದ್ದಾರೆ. ಮಳೆಯಾಶ್ರಯಿತ ರೈತರಿಗೆ ಕೃಷಿ ವಿಶ್ವವಿದ್ಯಾಲಯ, ಕೃಷಿ ಕಾಲೇಜುಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದು ಕೃಷಿ ವಿವಿಗಳಿಗೆ ಕರೆ ನೀಡಿದರು.

ನಮ್ಮ ಸರಕಾರ ಕೃಷಿಗೆ ಆದ್ಯತೆ ನೀಡಿದ್ದು, ರೈತರಿಗೆ ರೈತರಿಗೆ ಸಾಲ, ಗೊಬ್ಬರ, ಬೀಜ, ಕೃಷಿ ಯಂತ್ರೋಪಕರಣಗಳ ವಿತರಣೆ, ಹೊಸ ತಳಿಗಳ ಸಂಶೋಧನೆಗೆ ಸಹಕಾರ ನೀಡುತ್ತಿದೆ. ಕೃಷಿ ಭೂಮಿ ಹೆಚ್ಚಾಗದೇ, ಇಳುವರಿ ಪ್ರಮಾಣ ಹೆಚ್ಚಾಗದೇ ಕೇವಲಕೃಷಿ ವಿವಿಗಳ ಸಂಖ್ಯೆ ಹೆಚ್ಚಿಸಿದರೆ ಯಾವ ಪ್ರಯೋಜನವೂ ಆಗುವುದಿಲ್ಲ ಎಂದರು.

ಕೃಷಿ ವಿವಿಯ ಪ್ರಕಟನೆಗಳನ್ನು ಲೋಕಾರ್ಪಣೆ ಮಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ವ್ಯವಸಾಯ ಮಾಡಿ, ಲಾಭ ತೋರಿಸಿಕೊಟ್ಟು, ಕೃಷಿ ಲಾಭದಾಯಕವಾಗಿದೆ ಎಂಬುದನ್ನು ಪ್ರಶಸ್ತಿ ಪಡೆದ ರೈತರು ದೃಢಪಡಿಸಿದ್ದಾರೆ. ನಮ್ಮ ಸರಕಾರ ಕೃಷಿಗೆ ಆದ್ಯತೆ ನೀಡಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ನೂತನ ಸಂಶೋಧನೆ, ತಳಿ ಅಭಿವೃದ್ಧಿ ಮೂಲಕ ಹೆಸರುಗಳಿಸಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ.ಎಲ್. ಪಾಟೀಲ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಎನ್.ಎಚ್.ಕೋನರಡ್ಡಿ, ಅಬ್ಬಯ್ಯ ಪ್ರಸಾದ, ವಿಜಯಾನಂದ ಕಾಶಪ್ಪನವರ, ಯಾಶೀರ ಅಹ್ಮದ ಪಠಾಣ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಜಿ.ಎಸ್.ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ. ಸಿಇಒ ಭುವನೇಶ ಪಾಟೀಲ, ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ನಿಗಮ ಮಂಡಳಿಗಳ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷಿ ಮೇಳದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಪ್ರಶಸ್ತಿ ಪುರಸ್ಕೃತರು: ರೇಣುಕಾ ಬೋಚಣ್ಣವರ, ಬಸಮ್ಮ ಚನ್ನೂರ, ಸುಧಾ ಮುಶಣ್ಣವರ, ಕೃಷ್ಣಾಬಾಯಿ ಸಾಳುಂಕೆ, ಸಂಗೀತಾ ಕಾಂತಿ, ಕಮಲಾ ಕೋಟೆಕರ, ಶಿವಲೀಲಾ ಹಿತ್ತಲಮನಿ ಅವರಿಗೆ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದರೆ, ರಾಮನಗೌಡ ಪಾಟೀಲ, ರಾಜೀವ ದಾನಪ್ಪನವರ, ಗರಡಪ್ಪ ಜಂತ್ಲಿ, ನಿಂಗನಗೌಡ ಪಾಟೀಲ, ಅರ್ಜುನ ಗಲಗಲಿ, ಸುಬ್ಬರಾಯ ಹೆಗಡೆ, ಶೌಕತ್‌ಅಲಿ ಲಂಬೂನವರ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನರಾದರು.

ಶೀಘ್ರದಲ್ಲೇ ಬೆಳೆ ಪರಿಹಾರ ವಿತರಣೆ: ಸಚಿವ ಸಂತೋಷ ಲಾಡ್ ಮಾರ್ಗದರ್ಶನದಲ್ಲಿ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಬೆಳೆಹಾನಿ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 97,000 ಎಕರೆ ಭೂಮಿಯಲ್ಲಿ ಬೆಳೆಹಾನಿಯಾಗಿದೆ. ಶೀಘ್ರದಲ್ಲೇ ಬೆಳೆ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ನಾನು ರೈತ ಸಂಘದಲ್ಲಿದ್ದೆ: ನಾನು ಒಬ್ಬ ರೈತ. ನಾನೂ ಕೃಷಿ ಮಾಡಿದ್ದೇನೆ, ಕೃಷಿಕರ ಬೇಡಿಕೆಗಾಗಿ ಹೋರಾಟ ಮಾಡಿದ್ದೇನೆ. 1980ರಿಂದ 1983ರವರೆಗೆ ಮೈಸೂರು ಜಿಲ್ಲೆಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಹೊರಟ್ಟಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿರಿ: ಬಸವರಾಜ ಹೊರಟ್ಟಿ ಶ್ರೇಷ್ಠ ರಾಜಕಾರಣಿಯೊಂದಿಗೆ ಒಳ್ಳೆಯ ಕೃಷಿಕರೂ ಆಗಿದ್ದಾರೆ. ಅವರು 45 ವರ್ಷಗಳಿಂದ ರಾಜಕಾರಣದಲ್ಲಿದ್ದು, 8 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ. ಅವರು ಇನ್ನೂ 2 ಬಾರಿ ಗೆದ್ದರೂ ಅಚ್ಚರಿಯಿಲ್ಲ. ಅವರ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಅವರು 130 ಆಕಳು ಪಾಲನೆ ಮಾಡುತ್ತಿದ್ದು, ಪ್ರಗತಿಪರ ರೈತರಾಗಿಯೂ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಮುಂದಿನ ವರ್ಷ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿರಿ ಎಂದು ಹೇಳಿದ ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಅವರ ಕಡೆಗೆ ನೋಡಿ ನಕ್ಕರು. ಆಗ ಬಸವರಾಜ ಹೊರಟ್ಟಿ ಸಿಎಂಗೆ ಕೈ ಮುಗಿದರು.

ಮಣ್ಣು ಪರೀಕ್ಷೆಗೆ ಕ್ರಮದ ಭರವಸೆ: ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರೈತರೊಬ್ಬರು ಎದ್ದು ನಿಂತು, ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದವರು ರೈತರ ಹೊಲಕ್ಕೆ ಬಂದು ಮಣ್ಣು ಪರೀಕ್ಷೆ ಮಾಡುವುದಿಲ್ಲ. ಮಣ್ಣು ಪರೀಕ್ಷೆ ಮಾಡುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ಆಗ ಸಿಎಂ ಸಿದ್ದರಾಮಯ್ಯ, ಮಣ್ಣು ಪರೀಕ್ಷೆ ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಭಾಷಣ ಮಧ್ಯೆಯೇ ಹೊರ ನಡೆದ ಮಹಿಳೆಯರು: ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸಭಾಂಗಣದಲ್ಲಿ ಕುಳಿತಿದ್ದ ಹಲವು ಮಹಿಳೆಯರು ಹೊರಗೆ ಹೋಗಲು ಮುಂದಾದರು. ಆಗ ಪೊಲೀಸರು ಬಾಗಿಲು ತೆರೆಯದೇ ಇದ್ದಾಗ ಮಹಿಳೆಯರು ಗದ್ದಲ ಮಾಡಲಾರಂಭಿಸಿದರು. ಆಗ ಭಾಷಣ ನಿಲ್ಲಿಸಿದ ಸಿದ್ದರಾಮಯ್ಯ, “ಏನ್ರಮ್ಮ ಅದು, ಬಾಗಿಲು ತೆಗಿರಪ್ಪಾ, ಹೋಗುವವರು ಹೋಗಲಿ ಬಿಡಿ’ ಎಂದು ಹೇಳಿ ಬಾಗಿಲು ತೆಗೆಯಲು ಪೊಲೀಸರಿಗೆ ಸೂಚಿಸಿದರು.

Previous articleಹುಬ್ಬಳ್ಳಿ: ವಿಮಾನದ ತುರ್ತು ಬಾಗಿಲು ತೆಗೆದ ಪ್ರಯಾಣಿಕ – ದೂರು ದಾಖಲು
Next articleಬೆಳಗಾವಿ-ಧಾರವಾಡ ರೈಲು ಮಾರ್ಗ ವಿಳಂಬಕ್ಕೆ ಲಾಡ್ ಅಡ್ಡಗಾಲು: ಸೋಮಣ್ಣ

LEAVE A REPLY

Please enter your comment!
Please enter your name here