140 ಕೋಟಿ ಭಾರತೀಯರೇ ನನ್ನ ರಿಮೋಟ್‌ ಕಂಟ್ರೋಲ್ – ಮೋದಿ

1
137

ಅಸ್ಸಾಂ: ಈಶಾನ್ಯ ರಾಜ್ಯಗಳ ತಮ್ಮ ಎರಡು ದಿನಗಳ ಭೇಟಿಯ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಧರಾಂಗ್ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಸುಮಾರು ₹18,530 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ ಅವರು, ನಂತರ ನಡೆದ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಪ್ರಭಾವಶೀಲ ಭಾಷಣ ಮಾಡಿದರು.

ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ: ಪ್ರಧಾನಿ ಮೋದಿ ಅಸ್ಸಾಂನಲ್ಲಿ ರಸ್ತೆ, ಸೇತುವೆ, ವಿದ್ಯುತ್, ನೀರು, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಯೋಜನೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು “ಅಸ್ಸಾಂ ಈಗ ಭಾರತದ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದು. ಕಳೆದ ದಶಕದಲ್ಲಿ ಅಭಿವೃದ್ಧಿ ಸಾಧಿಸಲು ಹರಸಾಹಸ ಪಡುತ್ತಿದ್ದ ರಾಜ್ಯವು ಇಂದು ಶೇಕಡ 13ರ ಬೆಳವಣಿಗೆ ಸಾಧಿಸುತ್ತಿದೆ ಎಂಬುದು ಸಂತೋಷದ ಸಂಗತಿ” ಎಂದು ಹೇಳಿದರು.

ಅವರು ರಾಜ್ಯದ ಮಹಾನ್ ಪುತ್ರ, ಖ್ಯಾತ ಗಾಯಕ-ಸಾಹಿತ್ಯಕಾರ ಭೂಪೇನ್ ಹಜಾರಿಕಾ ಅವರ ಕನಸು ನನಸು ಮಾಡಲು ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬದ್ಧವಾಗಿದೆ ಎಂದೂ ಘೋಷಿಸಿದರು. “ನಮ್ಮ ಸರ್ಕಾರ ಭಾರತ ರತ್ನ ನೀಡಿ ಭೂಪೇನ್ ಹಜಾರಿಕಾ ಅವರಿಗೆ ಗೌರವ ನೀಡಿದೆ. ಆದರೆ ಇದನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸುತ್ತಿದೆ. ತೀರ್ಪು ಕೊಡುವವರು ಕಾಂಗ್ರೆಸ್ ಅಲ್ಲ, ಅಸ್ಸಾಂ ಜನರು” ಎಂದು ಹೇಳಿದರು.

ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ: ಭಾಷಣದಲ್ಲಿ ಮೋದಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. “ನನಗೆ ಗೊತ್ತು, ಇಡೀ ಕಾಂಗ್ರೆಸ್ ವ್ಯವಸ್ಥೆಯೇ ನನ್ನನ್ನು ಗುರಿಯಾಗಿಸಿಕೊಂಡಿದೆ. ಅವರು ‘ಮೋದಿ ಮತ್ತೆ ಅಳುತ್ತಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜನರೇ ನನ್ನ ದೇವರು. ನಾನು ನನ್ನ ನೋವನ್ನು ಅವರ ಮುಂದೆ ವ್ಯಕ್ತಪಡಿಸದಿದ್ದರೆ ಇನ್ನೇಲ್ಲಿ ಮಾಡಲಿ? ಈ ದೇಶದ ಜನರೇ ನನ್ನ ನಿಯಂತ್ರಕರು, ನನ್ನನ್ನು ಬೇರೆ ಯಾವುದೇ ಶಕ್ತಿಯಿಂದ ನಿಯಂತ್ರಿಸಲು ಸಾಧ್ಯವಿಲ್ಲ. 140 ಕೋಟಿ ಭಾರತೀಯರೇ ನನ್ನ ರಿಮೋಟ್ ಕಂಟ್ರೋಲ್” ಎಂದು ಘೋಷಿಸಿದರು.

ನಾನು ಶಿವನ ಭಕ್ತ, ನಿಂದನೆಗಳನ್ನು ವಿಷದಂತೆ ನುಂಗುತ್ತೇನೆ: ಮೋದಿಯವರ ದಿವಂಗತ ತಾಯಿ ಹೀರಾಬೆನ್‌ ಅವರನ್ನು ಗುರಿಯಾಗಿಸಿಕೊಂಡು ವಿರೋಧ ಪಕ್ಷ ಮಾಡಿದ್ದ ಟೀಕೆಗೆ ಅವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. “ನನ್ನ ತಾಯಿ ಬಗ್ಗೆ ಅವಹೇಳನ ಮಾಡಲಾಗಿದೆ. ನಾನು ಶಿವನ ಭಕ್ತ. ಶಿವನು ಹೇಗೆ ವಿಷವನ್ನು ನುಂಗಿದರೋ, ನಾನೂ ಆ ನಿಂದನೆಗಳ ವಿಷವನ್ನು ನುಂಗುತ್ತೇನೆ” ಎಂದು ಹೇಳಿದರು.

ದೇಶದ ಪ್ರಗತಿ ಕುರಿತು ಹೇಳಿಕೆ: ಮೋದಿ ತಮ್ಮ ಭಾಷಣದ ಕೊನೆಯಲ್ಲಿ ದೇಶದ ಬೆಳವಣಿಗೆಯನ್ನು ಉಲ್ಲೇಖಿಸಿ “ಇಂದು ಭಾರತ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಈ ಪ್ರಗತಿಯಲ್ಲಿ ಈಶಾನ್ಯ ಭಾರತದ ಪಾತ್ರ ಮಹತ್ವದ್ದಾಗಿದೆ. ಅಸ್ಸಾಂ ಸೇರಿದಂತೆ ಈ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ನಡೆಯುತ್ತಿದೆ” ಎಂದರು.

Previous articleಮಂಗಳೂರು: ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಆಗ್ರಹ – ಭರತ್ ಶೆಟ್ಟಿ
Next articleಭಾರತೀಯ ಮಹಿಳಾ ಬಾಕ್ಸರ್‌ಗಳಿಗೆ ವಿಶ್ವ ವೇದಿಕೆಯಲ್ಲಿ ಕಿರೀಟ

1 COMMENT

LEAVE A REPLY

Please enter your comment!
Please enter your name here