ಹಾಸನ: ಹಾನಸ ಜಿಲ್ಲೆಯ ಹೊಸಳ್ಳಿಯಲ್ಲಿ ಗಣೇಶೋತ್ಸವ ಮೆರವಣಿಗೆಯ ಸಮಯದಲ್ಲಿ ಟ್ರಕ್ ನಿಯಂತ್ರಣ ತಪ್ಪಿ ಜನಸ್ತೋಮದೊಳಗೆ ನುಗ್ಗಿ ಭೀಕರ ಅಪಘಾತ ಸಂಭವಿಸಿದ್ದು, ಒಟ್ಟು 9 ಮಂದಿ ದುರ್ಮರಣ ಹೊಂದಿದ್ದಾರೆ. ಈ ದುರಂತದಲ್ಲಿ ಹಲವಾರು ಮಂದಿ ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ.
ಶನಿವಾರ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್.ಡಿ. ದೇವೇಗೌಡ ಅವರು ಹಾಸನದ ಹಿಮ್ಸ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಅವರು, ಶೀಘ್ರ ಗುಣಮುಖರಾಗುವಂತೆ ಆಶಿಸಿದರು.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದ ದೇವೇಗೌಡ, ಜೆಡಿಎಸ್ ಪಕ್ಷದ ವತಿಯಿಂದ ತಲಾ ₹1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಜೊತೆಗೆ, ಗಾಯಾಳುಗಳಿಗೆ ಹಂತ ಹಂತವಾಗಿ ಪರಿಹಾರವನ್ನು ವಾಗ್ದಾನ ಮಾಡಿದರು:
ಗಂಭೀರವಾಗಿ ಗಾಯಗೊಂಡವರಿಗೆ ₹25,000
ಮಧ್ಯಮ ಮಟ್ಟದ ಗಾಯಗೊಂಡವರಿಗೆ ₹20,000
ಚಿಕ್ಕಪುಟ್ಟ ಗಾಯಗೊಂಡವರಿಗೆ ₹15,000
ದೇವೇಗೌಡ ಅವರು, “ಈ ಘಟನೆ ಅತ್ಯಂತ ದುಃಖಕರ. ಸರ್ಕಾರದಿಂದ ನೀಡುವ ಪರಿಹಾರದ ಮೊತ್ತವು ಅಲ್ಪವಾಗಿದೆ. ಸರ್ಕಾರವು ಪರಿಹಾರವನ್ನು ಹೆಚ್ಚಿಸಬೇಕು ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿದರು.
ಸ್ಥಳೀಯ ಆಡಳಿತವು ತನಿಖೆ ಆರಂಭಿಸಿದ್ದು, ಟ್ರಕ್ ನಿಯಂತ್ರಣ ತಪ್ಪಲು ಕಾರಣವಾದ ಅಂಶಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ.