ಫ್ಲೋರಿಡಾ ದೂರದ ಅಮೆರಿಕದಲ್ಲಿರುವ ಪ್ರದೇಶ. ಆದರೆ ಇನ್ನು ಮುಂದೆ ಫ್ಲೋರಿಡಾದಲ್ಲಿ ನೀವು ನಂದಿನಿ ತುಪ್ಪ, ಸಿಹಿ ಪದಾರ್ಥಗಳನ್ನು ಸವಿಯಬಹುದು. ಹೌದು ಈಗ ಫ್ಲೋರಿಡಾದಲ್ಲಿಯೂ ನಂದಿನಿ ಉತ್ಪನ್ನ ಮಾರಾಟಕ್ಕೆ ಚಾಲನೆ ಕೊಡಲಾಗಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್) ಈ ಕುರಿತು ಮಾಹಿತಿ ನೀಡಿದೆ. ಯುಎಸ್ಎಯ ಫ್ಲೋರಿಡಾದಲ್ಲಿ ನಡೆದ ‘ನಾವಿಕ ವಿಶ್ವ ಕನ್ನಡ ಸಮಾವೇಶ -2025’ ವೇದಿಕೆಯಲ್ಲಿ ನಂದಿನಿ ತುಪ್ಪ ಮತ್ತು ಸಿಹಿ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.
ಜಗತ್ತಿನಾದ್ಯಂತ ಇರುವ ಕನ್ನಡಿಗರು ಸೇರಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಆಚರಿಸಿ ಹಾಗೂ ಉಳಿಸುವ ಉದ್ದೇಶದಿಂದ ‘ನಾವು ವಿಶ್ವ ಕನ್ನಡಿಗರು’ ಸಂಘಟನೆ ವತಿಯಿಂದ ಯುಎಸ್‌ಎಯ ಫ್ಲೋರಿಡಾದಲ್ಲಿ ‘ನಾವಿಕ ವಿಶ್ವ ಕನ್ನಡ ಸಮಾವೇಶ-2025’ ಅನ್ನು ದಿನಾಂಕ 29.08.2025 ರಿಂದ 31.08.2025 ರವರೆಗೆ ನಡೆಸಲಾಗುತ್ತಿದೆ.
ಕರುನಾಡ ಪ್ರತಿಷ್ಠಿತ ಮತ್ತು ಹೆಮ್ಮೆಯ ‘ನಂದಿನಿ’ ಉತ್ಪನ್ನಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಮತ್ತು ಮಾರಾಟಕ್ಕೆ ಈ ಸಮಾವೇಶವು ಉತ್ತಮ ವೇದಿಕೆಯಾಗಲಿರುವ ನಿಟ್ಟಿನಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೆಶಕ ಶಿವಸ್ವಾಮಿ ಬಿ. ಅವರು ಭಾಗವಹಿಸಿದ್ದು ದಿನಾಂಕ 29.08.2025 ರಂದು ನಡೆದ ಕಾರ್ಯಕ್ರಮದಲ್ಲಿ ನಂದಿನಿ ತುಪ್ಪ ಮತ್ತು ಸಿಹಿ ಉತ್ಪನ್ನಗಳನ್ನು ಅಮೆರಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ನಾವಿಕ ವಿಶ್ವ ಕನ್ನಡ ಸಮಾವೇಶ-2025 ಉದ್ದೇಶಿಸಿ ಮಾತನಾಡಿದ ಅವರು, “ಈಗಾಗಲೇ ಮೆ.ಕೂಲು ಸೂಪರ್‌ಫುಡ್ಸ್ ಪ್ರೈ ಲಿ ಅವರನ್ನು ನಂದಿನಿ ಉತ್ಪನ್ನಗಳಾದ ತುಪ್ಪ, ಪೇಡ, ಮೈಸೂರ್ ಪಾಕ್ ಹಾಗೂ ಬೆಣ್ಣೆ ರಫ್ತುಗಾಗಿ ನೇಮಿಸಲಾಗಿದ್ದು ಸೆಪ್ಟೆಂಬರ್ 2025ರಿಂದ ಅಮೆರಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳು ದೊರೆಯಲಿವೆ” ಎಂದು ಹೇಳಿದರು.
“ಅಂತರರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಿ, ಡೇರಿ ಉತ್ಪನ್ನಗಳ ಆಮದುದಾರರೊಂದಿಗೆ ಪರಸ್ಪರ ಸಂವಾದವನ್ನು ನಡೆಸಿ, ಈಗಾಗಲೇ ನಂದಿನಿ ಉತ್ಪನ್ನಗಳನ್ನು ಸಿಂಗಾಪುರ, ದುಬೈ, ಮಾಲೀನ್ಸ್ ಹಾಗೂ ಬ್ರುನೈ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ” ಎಂದರು.
“ವಿಶ್ವದೆಲ್ಲೆಡೆ ಮಾರಾಟ ವಿಸ್ತರಣೆಗೆ ಉದ್ದೇಶಲಾಗಿದೆ. ಜೊತೆಗೆ, ನಾವಿಕ ವಿಶ್ವ ಕನ್ನಡ ಸಮಾವೇಶ-2025ರಲ್ಲಿ ನಂದಿನಿ ಸ್ಟಾಲ್ ಪ್ರಸ್ತುತಪಡಿಸಿ ಸಮಾವೇಶದಲ್ಲಿ ಭಾಗವಹಿಸಿರುವ ಗಣ್ಯರು ಹಾಗೂ ಅತಿಥಿಗಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರದರ್ಶನದೊಂದಿಗೆ, ಉತ್ಪನ್ನಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸಹ ಕೈಗೊಳ್ಳಲಾಗಿರುತ್ತದೆ” ಎಂದು ತಿಳಿಸಿದರು.