ಜಿ.ಆರ್.ಬಿ
ಚಿತ್ರ: ರಿಪ್ಪನ್ ಸ್ವಾಮಿ
ನಿರ್ದೇಶನ: ಕಿಶೋರ್ ಮೂಡುಬಿದ್ರೆ
ನಿರ್ಮಾಣ: ಪಂಚಾನನ ಫಿಲಂಸ್
ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್, ಯಮುನಾ ಶ್ರೀನಿಧಿ, ಪ್ರಕಾಶ್ ತುಮಿನಾಡು.
ರೇಟಿಂಗ್ಸ್: 3
ಆತ ಊರಿಗೆ ಮಾರಿ… ಮನೆಯವರಿಗೂ… ನೇರವಾದಿ, ಕಣ್ಣಲ್ಲೇ ಮಾತಾಡುವ, ಮಾತಿನಲ್ಲೇ ಗುಂಡು ಹಾರಿಸುವ ರಗಡ್ ಆಸಾಮಿಯೇ ಮಲೆನಾಡ ಮಡಿಲಲ್ಲಿ ಬಿಂದಾಸ್ ಆಗಿ ಓಡಾಡಿ ಕೊಂಡಿರುವ ರಿಪ್ಪನ್ ಸ್ವಾಮಿ. ಇದೊಂದು ಇಂಟ್ರೊಡಕ್ಷನ್ ಆತನ ಒಟ್ಟಾರೆ ಸ್ವಭಾವವನ್ನು ಹಿಡಿದಿಡುವುದಿಲ್ಲವಾದರೂ, ರಿಪ್ಪನ್ ಸ್ವಾಮಿಯ ಒಟ್ಟಾರೆ ಬಯೋಡೇಟಾ ಏನೆಂದು ಅರಿತುಕೊಳ್ಳಲು ಇಡೀ ಸಿನಿಮಾವನ್ನೇ ನೋಡಬೇಕಾಗುತ್ತದೆ.
ಒಮ್ಮೆ ಕೋಪಿಷ್ಠನಾಗಿಯೂ, ಮತ್ತೊಮ್ಮೆ ಮಡದಿಯೊಂದಿಗೆ ಶೃಂಗಾರದ ಭಾವನೆಯಲ್ಲಿರುವ ಸ್ವಾಮಿ, ಯಾವಾಗ ಯಾರಿಗೆ ಸಂಚು ಹೂಡುತ್ತಿರುತ್ತಾನೆ ಎಂಬುದೇ ಸಾಕಷ್ಟು ಗೌಪ್ಯ..! ಮಲೆನಾಡು ಹಚ್ಚ ಹಸಿರಿನಿಂದ ಕೂಡಿರುತ್ತದೆ ಎಂಬುದು ಸಾಮಾನ್ಯರಿಗೂ ತಿಳಿದಿರುವ ವಿಷಯ. ಆದರೆ ಅದು ರಿಪ್ಪನ್ ಸ್ವಾಮಿ ಕಣ್ಣಲ್ಲಿ ಮಾತ್ರ ಕೆಂಪು ಕೆಂಪಾಗಿ ಕಾಣುತ್ತಿರುವಂತೆ ನೋಡುಗರಿಗೆ ಭಾಸವಾಗುತ್ತದೆ.
ಯಾಕೆಂದರೆ ಒಂದರ ಹಿಂದೊಂದರಂತೆ ಸಂಚು ರೂಪಿಸಿ, ಪರಲೋಕಕ್ಕೆ ಕಳಿಸುವ ರಿಪ್ಪನ್ ಸ್ವಾಮಿ, ತನಗೇ ತಾನು ಖೆಡ್ಡಾ ತೋಡಿಕೊಳ್ಳುತ್ತಾನಾ… ಎಂಬುದು ಮಾತ್ರ ಕೊನೆಯವರೆಗಿನ ಕೌತುಕ..! ದಟ್ಟ ಕಾನನ, ಅದರಲ್ಲೊಂದು ಪುಟ್ಟ ಊರು. ಅದರ ಮಧ್ಯೆ ಕಾಫಿ ಎಸ್ಟೇಟ್… ನಮ್ಮ ಸಂಸಾರ ಆನಂದ ಸಾಗರ…’ ಎಂದು ನಲಿದಾಡುವಂತೆ ಕಾಣುವ ಗಂಡ-ಹೆಂಡತಿ, ಊರಿನವರ ಮುಂದೆ ಗುರ್… ಎನ್ನುವ ಸ್ವಾಮಿ, ಆಕೆಯನ್ನು ಒಲಿಸಿಕೊಂಡಿದ್ದೇ ಇಂಟರೆಸ್ಟಿಂಗ್ ಸ್ಟೋರಿ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಕೊಲ್ಲುವ ಕಥೆ ತೆರೆದುಕೊಳ್ಳುತ್ತದೆ.
ಅದು ಯಾರದ್ದು..? ಯಾಕಾಗಿ..? ಎಂಬುದೇ ಒಟ್ಟಾರೆ ಸಾರ. ವಿಜಯ ರಾಘವೇಂದ್ರ ನಟನೆಯ ಈವರೆಗಿನ ಸಿನಿಮಾಕ್ಕೂ, ರಿಪ್ಪನ್ ಸ್ವಾಮಿ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕೆಲವೊಮ್ಮೆ ಚಿನ್ನಾರಿಮುತ್ತ ಇಷ್ಟೊಂದು ಕ್ರೂರಿಯಾದನಾ… ಎನಿಸುವುದುಂಟು. ಹೀಗಾಗಿ ಸಿನಿಮಾ ತುಂಬೆಲ್ಲಾ ರಾಘುವಿನದ್ದೇ ಅಬ್ಬರ..! ಅಶ್ವಿನಿ ಚಂದ್ರಶೇಖರ್, ಯಮುನಾ ಶ್ರೀನಿಧಿ, ಪ್ರಕಾಶ್ ತುಮಿನಾಡು ಇತರರು ದೊರಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.