Anchor Anushree. ಕನ್ನಡದ ಖ್ಯಾತ ನಿರೂಪಕಿ, ನಟಿ ಅನುಶ್ರೀ ವಿವಾಹ ಬೆಂಗಳೂರು ನಗರದಲ್ಲಿ ಗುರುವಾರ ನಡೆಯಿತು. ಚಿತ್ರರಂಗದ ಹಲವಾರು ಗಣ್ಯರು ಹೊಸ ಜೋಡಿಗೆ ಶುಭಾಶಯಗಳನ್ನು ತಿಳಿಸಿದರು.
ಉದ್ಯಮಿ ರೋಷನ್ ಜೊತೆ ನಟಿ, ನಿರೂಪಕಿ ಅನುಶ್ರೀ ವಿವಾಹವಾಗಿದ್ದಾರೆ. ಇದು ಲವ್ ಕಮ್ ಆರೇಂಜ್ ಮ್ಯಾರೇಜ್. ಆಪ್ತರು, ಕುಟುಂಬದವರ ಸಮ್ಮುಖದಲ್ಲಿ ಬೆಂಗಳೂರು ನಗರದಲ್ಲಿ ಅದ್ದೂರಿಯಾಗಿ ವಿವಾಹ ನಡೆಯಿತು. ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವಾರು ಗಣ್ಯರು ವಿವಾಹಕ್ಕೆ ಸಾಕ್ಷಿಯಾದರು.
ಅನುಶ್ರೀ ನಟ ದಿ.ಪುನೀತ್ ರಾಜ್‌ಕುಮಾರ್ ದೊಡ್ಡ ಅಭಿಮಾನಿ. ವಿವಾಹ ಸಮಾರಂಭದಲ್ಲಿಯೂ ಮದುವೆಯ ಹಾಲ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಚಿತ್ರವೊಂದನ್ನು ಇಟ್ಟು, ಹೂವುಗಳಿಂದ ಅಲಂಕರಿಸಲಾಗಿತ್ತು. ನಟಿ ಅನುಶ್ರೀ ವಿವಾಹದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಹುಕಾಲದ ಗೆಳೆಯ ರೋಷನ್‌ನನ್ನು ಅನುಶ್ರೀ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಹೇಳಿ ಬಂದಿತ್ತು. ಗುರುವಾರ ಬೆಂಗಳೂರು ನಗರದ ಹೊರವಲಯದಲ್ಲಿ ವಿವಾಹ ಸಮಾರಂಭ ನಡೆದಿದೆ. ಅನುಶ್ರೀ ತಮ್ಮ ವಿವಾಹದ ಬಗ್ಗೆ ಎಲ್ಲಿಯೂ ಹೇಳಿ ಕೊಂಡಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮೂಲಕ ವಿವಾಹದ ಸುದ್ದಿ ಬಹಿರಂಗವಾಗಿತ್ತು. ಕಳೆದ ವಾರ ವಿವಾಹದ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು.
ರೋಷನ್ ಕೊಡಗು ಮೂಲದವರು ಎಂದು ತಿಳಿದುಬಂದಿದೆ. ಅನುಶ್ರೀ ಜೊತೆ ಹಲವಾರು ಸಮಾರಂಭಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಬೆಂಗಳೂರು ನಗರದಲ್ಲಿಯೇ ನೆಲೆಸಿದ್ದಾರೆ. ಅನುಶ್ರೀ ವಿವಾಹದ ಕುರಿತು ಯೂಟ್ಯೂಬ್ ಚಾನಲ್‌ಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳಿಗೆ ಗುರುವಾರ ತೆರೆ ಬಿದ್ದಿದೆ.
ಝೀ ಕನ್ನಡದ ವಿವಿಧ ರಿಯಾಲಿಟಿ ಶೋಗಳ ನಿರೂಪಕಿ ಅನುಶ್ರೀ ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಗುರುವಾರ ಅವರ ವಿವಾಹ ಕಗ್ಗಲೀಪುರ ಬಳಿಯ ರೆಸಾರ್ಟ್‌ನಲ್ಲಿ ನಡೆಯಲಿದೆ ಎಂದು ತಿಳಿದು ಅಭಿಮಾನಿಗಳು ರೆಸಾರ್ಟ್ ಬಳಿಕ ಜಮಾಯಿಸಿದ್ದರು. ಆದರೆ ಯಾರಿಗೂ ಸಹ ಒಳಗೆ ಹೋಗಲು ಅನುಮತಿ ಸಿಗಲಿಲ್ಲ.
ರೆಸಾರ್ಟ್‌ನಲ್ಲಿ ನಡೆದ ವಿವಾಹ ಕಾರ್ಯಕ್ರಮಕ್ಕೆ ಕುಟುಂಬದವರು, ಆಹ್ವಾನ ಪತ್ರಿಕೆ ಇದ್ದ ಗಣ್ಯರಿಗೆ ಮಾತ್ರ ಪ್ರವೇಶವಿತ್ತು. ಆದ್ದರಿಂದ ನೆಚ್ಚಿನ ನಿರೂಪಕಿ ವಿವಾಹ ನೋಡಲು, ಊಟ ಸವಿಯಲು ಬಂದ ಅಭಿಮಾನಿಗಳು ನಿರಾಸೆ ಅನುಭವಿಸಿದರು.
ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಜೊತೆ ಅನುಶ್ರೀ ವಿವಾಹಕ್ಕೆ ಆಗಮಿಸಿ ದಂಪತಿಗಳಿಗೆ ಶುಭ ಕೋರಿದರು. ಹಿರಿಯ ನಟಿ ತಾರಾ, ಡಾಲಿ ಧನಂಜಯ್, ನಾಗಭೂಷಣ್, ನಟಿ ಪ್ರೇಮಾ ಸೇರಿದಂತೆ ಹಲವಾರು ಗಣ್ಯರು ಅನುಶ್ರೀ ವಿವಾಹಕ್ಕೆ ಆಗಮಿಸಿದ್ದಾರೆ.