ಗದಗ: ಕ್ಷುಲ್ಲಕ ಕಾರಣಕ್ಕಾಗಿ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಗುಂಪು ಘರ್ಷಣೆಯಿಂದ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಡಿಎಆರ್ ಪೊಲೀಸ್ ತುಕಡಿ ನಿಯೋಜಿಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ಜನ ಪೊಲೀಸರನ್ನು ಮಫ್ತಿನಲ್ಲಿ ಗ್ರಾಮಕ್ಕೆ ಕಳಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ಮೇಲ್ನೋಟಕ್ಕೆ ಗ್ರಾಮದಲ್ಲಿ ಶಾಂತಿ ನೆಲೆಸಿದಂತೆ ಕಂಡು ಬಂದರೂ ಸಹ ಯಾವ ಸಂದರ್ಭದಲ್ಲಿ ಮತ್ತೆ ಗುಂಪು ಘರ್ಷಣೆಯಾಗಿ ಯಾರ ಮೇಲೆ ಹಲ್ಲೆಯಾಗುತ್ತದೆಯೊ ಎಂಬ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಗ್ರಾಮಸ್ಥರಲ್ಲಿ ಧೈರ್ಯ ತುಂಬಲು ಗದಗ ಡಿಎಸ್ಪಿ ಮುರ್ತುಜಾ ಖಾದ್ರಿ, ಗ್ರಾಮೀಣ ಸಿಪಿಐ ಸಂಗಮೇಶ ಶಿವಯೋಗಿ ಪ್ರತಿನಿತ್ಯ ಲಕ್ಕುಂಡಿಗೆ ಭೇಟಿ ನೀಡುತ್ತಿದ್ದಾರೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಜನ ಯುವಕರು ಗ್ರಾಮ ತೊರೆದಿದ್ದಾರೆ. ಗಲಭೆಗೆ ಕಾರಣವಾಗಿರುವ ಪುಂಡರ ಪತ್ತೆಗೆ ಗ್ರಾಮೀಣ ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ತಲೆಗೆ ತೀವ್ರ ಗಾಯಗೊಂಡು ಕಿಮ್ಸ್‌ಗೆ ದಾಖಲಾಗಿರುವ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. ಘರ್ಷಣೆಯಲ್ಲಿ ಚಿಕ್ಕಪುಟ್ಟ ಗಾಯಗಳಾಗಿದ್ದ ಎಂಟು ಜನರಿಗೆ ಕೆ.ಎಚ್. ಪಾಟೀಲ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಾಪಸ್ ಕಳಿಸಲಾಗಿದೆ.
ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದ ದಿನ, ಹಿಂದಿನ ದಿನ ಲಕ್ಕುಂಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಮೊಬೈಲ್ ಸಂಖ್ಯೆಗಳು, ಮೊಬೈಲ್ ಟಾವರ್‌ಗಳ ವಿವರ ಪೊಲೀಸರು ಕಲೆ ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.
ಮೇಲ್ನೋಟಕ್ಕೆ ಗುಂಪು ಘರ್ಷಣೆಗೆ ಜಾತ್ರೆಯಲ್ಲಿ ಜರುಗಿದ ಚಿಕ್ಕ ಘಟನೆ ಕಾರಣವೆಂದು ಹೇಳಲಾಗುತ್ತಿದ್ದರೂ ಘರ್ಷಣೆಗೆ ಗ್ರಾಮದ ಕೆಲ ಯುವಕರು ಅನಧಿಕೃತವಾಗಿ ನಡೆಸುತ್ತಿರುವ ಮೀಟರ್ ಬಡ್ಡಿದಂಧೆ, ದಂಧೇಕೋರರು ನಡೆಸುವ ದೈಹಿಕ ಹಲ್ಲೆ, ಮಿತಿಮೀರಿ ಬಡ್ಡಿ ವಸೂಲಿಯೆ ಕಾರಣವೆಂದು ತಿಳಿದು ಬಂದಿದೆ.
ಮೀಟರ್ ಬಡ್ಡಿದಂಧೆಕೋರರು ಲಕ್ಕುಂಡಿ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಜನರ ಆಸ್ತಿ, ದ್ವಿಚಕ್ರ ವಾಹನ, ಕಾರು, ಜೀಪುಗಳು, ಕೃಷಿ ಜಮೀನು ಸೇರಿದಂತೆ ವಿವಿಧ ಆಸ್ತಿಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಮೀಟರ್ ಬಡ್ಡಿದಂಧೇಕೋರರ ಹಾವಳಿಯಿಂದ ಬೇಸತ್ತ ಕೆಲವರು ಜಾತ್ರೆಯ ನೆಪದಲ್ಲಿ ಹಲ್ಲೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಜಾತಿ ನಿಂದನೆ ಪ್ರಕರಣ?: ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಗಾವಿ ಗ್ರಾಮದ ಮಲ್ಲವ್ವ ಸೋಮಪ್ಪ ಭಜಂತ್ರಿ ಎಂಬುವವರು ತಮ್ಮ ಪುತ್ರ ಕಿರಣ ಹಾಗೂ ಸ್ನೇಹಿತರಿಗೆ ಜಾತಿ ನಿಂದನೆ ಮಾಡಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಅಂಬರೀಷ ಶೇಖರಪ್ಪ ಕರೆಕಲ್ಲ, ಶಿವರಾಜ ಬಸಪ್ಪ ಕರೆಕಲ್ಲ, ಸಂಗಮೇಶ ವೀರಬಸಪ್ಪ ನರಗುಂದಮಠ, ಬಸವರಾಜ ಲಾವಾ ಕವಲೂರ, ಮಹ್ಮದರಫೀಕ ಮನ್ನೇಸಾಬ ಗುದಗ್ಯಾನವರ, ನವೀನ ದೇವಪ್ಪ ಬಿನ್ನಾಳ, ಅಭಿಷೇಕ ಶೇಖಪ್ಪ ಕಳ್ಳಿ, ಮಂಜುನಾಥ ಬಸವರಾಜ ಕಣವಿ ಹಾಗೂ ಇತರ ಹದಿನೈದು ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಕ್ಕುಂಡಿಯಲ್ಲಿ ಜರುಗಿದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಗಾಯಗೊಂಡಿರುವ ಹಾಗೂ ಹಲ್ಲೆ ಮಾಡಿರುವ ಯುವಕರ ಗುಂಪುಗಳು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ. ಘರ್ಷಣೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಗ್ರಾಮೀಣ ಪೊಲೀಸರ ಮೇಲೆ ರಾಜಕೀಯ ಪಕ್ಷಗಳ ಮರಿಪುಢಾರಿಗಳು ಪ್ರಕರಣ ಸಡಿಲಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ.