ಬೆಳಗಾವಿ: ಮಹಾರಾಷ್ಟ್ರದಿಂದ ಬೆಳಗಾವಿ ಕಡೆಗೆ ಸಾಗಿಸುತ್ತಿದ್ದ 50 ಕೆಜಿಯಷ್ಟು ಗಾಂಜಾವನ್ನು ಸುಳಗಾ ಗ್ರಾಮದ ದಾಬಾ ಬಳಿ ಕಾರು ತಪಾಸಣೆ ವೇಳೆ ವಶಪಡಿಸಿಕೊಂಡಿರುವುದಾಗಿ ಬೆಳಗಾವಿ ಪೊಲೀಸ್ ಆಯುಕ್ತ ಗುಲಾಬರಾವ್ ಬೊರಸೆ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಕಡೆಯಿಂದ ಬೆಳಗಾವಿಗೆ ಎರಡು ಕಾರು ತಡೆದು ತಪಾಸಣೆ ನಡೆಸಿದಾಗ ಅತಿದೊಡ್ಡ ಗಾಂಜಾ ಜಾಲ ಬಯಲಿಗೆ ಬಂದಿದೆ.
ಕಾರಿನಲ್ಲಿದ್ದ ಇಸ್ಮಾಯಿಲ್ ಹಾಗೂ ತಾಜೀರ್ ಅವರನ್ನು ವಿಚಾರಣೆ ನಡೆಸಿದಾಗ ಕೊಲ್ಹಾಪುರದ ಪ್ರಥಮೇಶ, ಹುಕ್ಕೇರಿ ತಾಲೂಕಿನ ತೇಜಸ ವಜಾರೆ, ಕೊಲ್ಹಾಪುರದ ಶಿವಕುಮಾರ ಅಸಾಬೆ, ಸಾತಾರಾದ ರಂಜಾನ್ ಜಮಾದಾರ ಸೇರಿ ಒಟ್ಟು ಆರು ಜನ ಆರೋಪಿಗಳು ಸೇರಿಕೊಂಡು ಸುಮಾರು 50 ಕೆಜಿ ಗಾಂಜಾ ಸಾಗಿಸುತ್ತಿದ್ದ ವಿಚಾರ ತಿಳಿದು ಬಂದಿದ್ದು ಇವರಿಂದ 50 ಕಿಲೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇದರೊಂದಿಗೆ ಆರೋಪಿಗಳ ಬಳಿಯಿದ್ದ 10 ಮೊಬೈಲ್ ಫೋನ್, ಒಂದು ಮಚ್ಚು, ಒಂದು ತೂಕದ ಮಷಿನ್, 4000 ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದ್ದು ಕೃತ್ಯಕ್ಕೆ ಬಳಿಸಿದ ಮೂರು ಕಾರು ಪೊಲೀಸರು ಜಪ್ತ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಗಾಂಜಾ ಮಾರಾಟ ಜಾಲದ ಪ್ರಮುಖ ಆರೋಪಿ ಹಾಗೂ ದಲ್ಲಾಳಿ ಇಸ್ಮಾಯಿಲ್ ಅಲಿಯಾಸ್ ಸದ್ದಾಮ್‌ನನ್ನು ಪೊಲೀಸರು ಬಂಧಿಸಿದ್ದು ಈತ ಮಧ್ಯಪ್ರದೇಶ ಹಾಗೂ ಓಡಿಸ್ಸಾದಿಂದ ಗಾಂಜಾ ತಂದು ಮಾರುತ್ತಿದ್ದ. ಪುಣೆ ಮತ್ತು ಮುಂಬೈನಿಂದ ಹೆರಾಯಿನ ಪೂರೈಕೆ ಮಾಡುತ್ತಿರುವುದಾಗಿ ತಿಳಿದಿದೆ. ಈ ಗಾಂಜಾ ದಾಳಿಯು ಇಲ್ಲಿಯವರೆಗೆ ನಡೆದಿರುವ ಅತಿ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೆಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಸುಮಾರು ದಿನಗಳಿಂದ ಬೆನ್ನಟ್ಟಿ ನಡೆಸಲಾಗಿದೆ. ಈ ಪ್ರಕರಣ ಬೇಧಿಸುವುದಕ್ಕಾಗಿ ಪಿ.ಐ. ಗಡ್ಡೆಕರ ಮುಂಬೈ ಹಾಗೂ ಇತರೆ ನಗರಗಳನ್ನು ಸುತ್ತಾಡಿ ಖಚಿತ ಮಾಹಿತಿ ಪಡೆದು ದಾಳಿಯ ರೂಪರೇಷೆ ರಚಿಸಿ ಕೊನೆಗೆ ಸಂಪೂರ್ಣ ಪ್ರಕರಣವನ್ನು ಬೇಧಿಸಿ ದಾಖಲೆ ಪ್ರಮಾಣದ ಗಾಂಜಾವನ್ನು ಒಂದೇ ದಾಳಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಬೇಧಿಸಿದ ಪೊಲೀಸ್ ತಂಡಕ್ಕೆ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.