ಬೆಳಗಾವಿ: ಕಿತ್ತೂರ ಪೊಲೀಸರು ಮನೆಕಳವು ಪ್ರಕರಣವನ್ನು ಭೇದಿಸಿ, ಆರೋಪಿತನನ್ನು ಬಂಧಿಸಿ 20 ಲಕ್ಷ 30 ಸಾವಿರ ರೂ. ಮೌಲ್ಯದ ಬಂಗಾರ-ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಜುಲೈ 8, 2024 ರಂದು ಕಿತ್ತೂರ ವಿದ್ಯಾಗಿರಿಯಲ್ಲಿದ್ದ ಪ್ರವೀಣ ಶಂಕರ ಇಟಗಿ ಅವರ ಮನೆಯಲ್ಲಿ ಕಳವು ನಡೆದಿದೆ. ಮನೆಯ ಹಿತ್ತಲ ಬಾಗಿಲನ್ನು ಮುರಿದು ಒಳಗೆ ನುಗ್ಗಿದ ಕಳ್ಳರು, ಬಂಗಾರ-ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿ ಒಟ್ಟು ರೂ. 11.60 ಲಕ್ಷ ಮೌಲ್ಯದ ವಸ್ತುಗಳನ್ನು ಕಳವುಮಾಡಿದ್ದರು. ಈ ಸಂಬಂಧ ಕಿತ್ತೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ವೈಜ್ಞಾನಿಕ ತಂತ್ರಜ್ಞಾನ ಆಧರಿಸಿ ಆರೋಪಿ ನಿತೇಶ್ ಅಲಿಯಾಸ್ ದೀಪು ಜಗನ್ನಾಥರಾವ ಢಾಪಳೆ (42), ರುಕ್ಕಿಣಿ ನಗರ, ಬೆಳಗಾವಿ ಅವರನ್ನು ಆಗಸ್ಟ್ 20, 2025 ರಂದು ಬಂಧಿಸಿದ್ದಾರೆ. ಆತನ ವಿರುದ್ಧ ಕಿತ್ತೂರ, ಬೈಲಹೊಂಗಲ ಮತ್ತು ಹುಕ್ಕೇರಿ ಠಾಣೆಗಳಲ್ಲಿ ಒಟ್ಟು 5 ಕಳವು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಸಹ ಭೇದಿಸಲಾಗಿದೆ.
ಬಂಧಿತನಿಂದ ಒಟ್ಟು 203 ಗ್ರಾಂ ಬಂಗಾರದ ಆಭರಣಗಳು ಹಾಗೂ ನಗದು ಸೇರಿ 20 ಲಕ್ಷ 30 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಪತ್ತೆ ಕಾರ್ಯಾಚರಣೆಯನ್ನು ಬೈಲಹೊಂಗಲ ಉಪವಿಭಾಗದ ಡಿ.ಎಸ್.ಪಿ ಡಾ. ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ, ಕಿತ್ತೂರ ವೃತ್ತದ ಸಿ.ಪಿ.ಐ ಶಿವಾನಂದ ಗುಡಗನಟ್ಟಿ, ಪಿ.ಎಸ್.ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿಯ ತಂಡ ನಡೆಸಿತು.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಹಾಗೂ ಹೆಚ್ಚುವರಿ ಎಸ್.ಪಿ ಆರ್.ಬಿ ಬಸರಗಿ ಅವರುಈ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ.