ಕಾರವಾರ: ಮೀನುಗಾರಿಕೆಗೆಂದು ಹೊರಟಿದ್ದ ಸಾಂಪ್ರದಾಯಿಕ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆದಿದೆ. ಅದೃಷ್ಟವಶಾತ್ ದೋಣಿಯಲ್ಲಿದ್ದ ಐವರೂ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿಲ್ಟ್ ಸರ್ಕಲ್ ಭಾಗದ ತೀರದಿಂದ ಏಂಡಿ ಬಲೆ ಹಾಕಲು ಐವರು ಮೀನುಗಾರರು ತಮ್ಮ ಸಾಂಪ್ರದಾಯಿಕ ದೋಣಿಯೊಂದಿಗೆ ಸಮುದ್ರಕ್ಕೆ ಇಳಿದಿದ್ದರು. ಸದ್ಯ ಕರಾವಳಿಯಲ್ಲಿ ರೆಡ್ ಅಲರ್ಟ್ ಇದ್ದು ಭಾರೀ ಗಾಳಿ ಸಹಿತ ಅಲೆಗಳ ಅಬ್ಬರ ಹೆಚ್ಚಾಗಿತ್ತು. ಈ ವೇಳೆ ತೀರದಿಂದ ಸುಮಾರು 20 ಮೀಟರ್ ದೂರ ದೋಣಿ ತೆರಳಿದ್ದು, ಈ ವೇಳೆ ಏಕಾಏಕಿ ರಕ್ಕಸ ಅಲೆಯೊಂದು ದೋಣಿಗೆ ಅಪ್ಪಳಿಸಿದೆ.
ಪರಿಣಾಮ ದೋಣಿಯಲ್ಲಿ ನೀರು ತುಂಬಿಕೊಂಡಿದ್ದು, ಬಲೆ ಸಹ ಇದ್ದಿದ್ದರಿಂದ ಭಾರದಿಂದ ದೋಣಿ ಮುಳುಗಲು ಪ್ರಾರಂಭಿಸಿದೆ. ಈ ವೇಳೆ ಅಪಾಯ ಅರಿತ ಮೀನುಗಾರರು ದೋಣಿಯಿಂದ ಸಮುದ್ರಕ್ಕೆ ಜಿಗಿದಿದ್ದು, ದಡದತ್ತ ಈಜಲು ಮುಂದಾಗಿದ್ದರು. ದೋಣಿ ಮುಳುಗಿದ್ದನ್ನು ಗಮನಿಸಿದ ಮೀನುಗಾರ ಉದಯ ಬಾನಾವಳಿಕರ್ ಕೂಡಲೇ ತಮ್ಮ ಮೋಟರ್ ಚಾಲಿತ ದೋಣಿಯನ್ನು ಮೀನುಗಾರರ ರಕ್ಷಣೆಗೆ ಕಳುಹಿಸಿದ್ದಾರೆ.
ಎರಡು ದೋಣಿಗಳ ಸಹಾಯದಿಂದ ನೀರಿಗೆ ಹಾರಿದ್ದ ಐವರೂ ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಬಳಿಕ ಇನ್ನೊಂದು ಬೋಟ್ ಸಹಾಯದಿಂದ ಮುಳುಗಿದ್ದ ದೋಣಿಯನ್ನೂ ಸಹ ತೀರಕ್ಕೆ ಎಳೆದುಕೊಂಡು ತರಲಾಗಿದೆ.