ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೇ ಪರಪ್ಪನ ಅಗ್ರಹಾರ ಸೇರಿರುವ ದರ್ಶನ್, ಪವಿತ್ರಾ ಗೌಡ ಸೇರಿ ಐವರಿಗೆ ವಿಚಾರಣಾಧೀನ ಕೈದಿಯ ನಂಬರ್ ನೀಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಗಳನ್ನು ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಐವರನ್ನು ಗುರುವಾರ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ಗುರುವಾರ ಸಂಜೆ ಬಳಿಕ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ್ದ ಎಲ್ಲ ಐದು ಆರೋಪಿಗಳಿಗೆ ಈಗ ವಿಚಾರಣಾಧೀನ ಕೈದಿಯ ನಂಬರ್ ನೀಡಲಾಗಿದೆ. ಮೊದಲ ಸಂಖ್ಯೆಯನ್ನು ಎ1 ಆರೋಪಿ ಪವಿತ್ರಾ ಗೌಡಗೆ ಕೊಡಲಾಗಿದ್ದು, ನಂತರದ ಸಂಖ್ಯೆಯನ್ನು ಎ2 ದರ್ಶನ ಹಾಗೂ ಉಳಿದ ಆರೋಪಿಗಳಿಗೆ ನೀಡಲಾಗಿದೆ.
ಪವಿತ್ರಾ ಗೌಡ ಕೈದಿ ನಂಬರ್ 7313, ದರ್ಶನ್ ಕೈದಿ ಸಂಖ್ಯೆ 7314 ಹಾಗೂ ದರ್ಶನ್ ಆಪ್ತ ಪ್ರದೋಷ್‌ಗೆ ಕೈದಿ ಸಂಖ್ಯೆ 7317 ನೀಡಲಾಗಿದೆ. ಮತ್ತಿಬ್ಬರು ಆರೋಪಿಗಳಾದ ನಾಗರಾಜ್‌ಗೆ ಕೈದಿ ಸಂಖ್ಯೆ 7315 ಮತ್ತು ಲಕ್ಷ್ಮಣಗೆ ಕೈದಿ ನಂಬರ್ 7316 ಕೊಡಲಾಗಿದೆ.
ದರ್ಶನ್ ಕಳೆದ ಬಾರಿ ಪರಪ್ಪನ ಅಗ್ರಹಾರಕ್ಕೆ ಸೇರಿದ್ದಾಗಲೂ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿತ್ತು. ಆಗ ದರ್ಶನ್ ಅಭಿಮಾನಿಗಳು ಕೈದಿ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಅಲ್ಲದೇ ತಮ್ಮ ವಾಹನಗಳ ಮೇಲೂ ಬರೆದುಕೊಂಡಿದ್ದರು. ಸದ್ಯ ದರ್ಶನ್‌ಗೆ ಬೇರೆ ವಿಚಾರಣಾಧೀನ ಕೈದಿ ಸಂಖ್ಯೆ ಸಿಕ್ಕಿದೆ. ಈ ಬಾರಿಯೂ ಫ್ಯಾನ್ಸ್ ಮತ್ತೇ ಏನು ಮಾಡುತ್ತಾರೋ ಎಂಬ ಕುತೂಹಲ ಮೂಡಿದೆ.
ಕೋರ್ಟ್ ಹೇಳಿದ್ದೇನು?: ಇದೊಂದು ಮಹತ್ವದ ತೀರ್ಪು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನು ಕುಮಾರ್, ಎ14 ಪ್ರದೋಶ್, ಎ11 ನಾಗರಾಜು ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದಿದೆ.
ಸರ್ಕಾರ ತನ್ನ ಮೇಲ್ಮನವಿಯಲ್ಲಿ ದರ್ಶನ್‌ಗೆ ಈ ಹಿಂದೆ ಕೂಡ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವು ಎಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ಮರು ದಿನ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ವಾದಿಸಿತ್ತು. ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದು ಸರಿ ಇಲ್ಲ. ದಾಖಲೆಗಳಿಗೆ ವಿರುದ್ಧವಾಗಿ ತೀರ್ಪು ನೀಡಲಾಗಿದೆ. ಕೊಲೆ ಮಾಡಲು ಬಳಸಿದ ಆಯುಧಗಳು ಮಾರಕವಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.
ಆದರೆ, ಮೃತಪಟ್ಟ ವ್ಯಕ್ತಿಯ ಮೈ ಮೇಲಿನ ಗಾಯಗಳು ಇದನ್ನು ಸುಳ್ಳು ಎಂದು ಹೇಳುತ್ತಿವೆ. ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂದು ಅನುಮಾನಿಸಲಾಗಿದೆ ಎಂದು ಹೇಳಿರುವ ಕೋರ್ಟ್, ಸಾಕ್ಷಿಗಳ ವಿಚಾರಣೆಯನ್ನು ನಡೆಸಿ, ಪ್ರಕರಣದ ವಿಚಾರಣೆ ನಡೆಸಿ ಎಂದು ನಿರ್ದೇಶನ ನೀಡಿದೆ.
ರಾಜಾತಿಥ್ಯದ ಬಗ್ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ: ಜೈಲಿಗೆ ಹೋದ ಬಳಿಕ ಆರೋಪಿ ಸಾಮಾನ್ಯ ಕೈದಿಯಂತೆಯೇ ಇರಬೇಕು. ಈ ಮುಂಚೆ ಆರೋಪಿಗೆ ಫೈವ್ ಸ್ಟಾರ್ ಸೌಲಭ್ಯ ನೀಡಲಾಗಿದೆ. ಇನ್ನುಮುಂದೆ ಸಾಮಾನ್ಯ ಕೈದಿಯಂತೆ ಇರಬೇಕು. ಆರೋಪಿ ಜೈಲಿನೊಳಗೆ ಸಿಗರೇಟ್ ಸೇದುವುದು ಕಂಡಬಂದರೆ ಜೈಲಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.