ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ 354ನೇ ಆರಾಧನಾ ಮಹೋತ್ಸವದ ಸೋಮವಾರ ಮಧ್ಯಾರಾಧನೆ ಅಂಗವಾಗಿ ಮಹಾಪಂಚಾಮೃತಾಭಿಷೇಕ ಹಾಗೂ ಚಿನ್ನದ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ ಶ್ರೀ ರಾಯರ ಮೂಲಬೃಂದಾವನದ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ, ಪಂಚಾಮೃತಾಭಿಷೇಕವನ್ನು ನೆರವೇರಿಸಲಾಯಿತು. ಶ್ರೀಮಠದಲ್ಲಿ ಆರಾಧನಾ ಮಹೋತ್ಸವದ ನಿಮಿತ್ತ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ ನಡೆದವು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮಹಾಪಂಚಾಮೃತಾಭಿಷೇಕವನ್ನು ನೆರವೇರಿಸಿದರು. ನಂತರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಾಕಾರದಲ್ಲಿ ಚಿನ್ನದ ರಥದಲ್ಲಿ ಶ್ರೀರಾಯರ ಚಿನ್ನದ ಪಾದುಕೆ, ಪರಿಮಳ ಗ್ರಂಥ ಹಾಗೂ ಪ್ರಭಾವಳಿನ್ನಿಟ್ಟು ಆಯೋಜಿಸಿದ್ದ ರಥೋತ್ಸವಕ್ಕೆ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿದರು. ಭಜನಾ ಮಂಡಳಿಗಳಿಂದ ಭಜನೆ, ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದಘೋಷ ಹಾಗೂ ವಾದ್ಯಮೇಳಗಳೊಂದಿಗೆ ಅದ್ಧೂರಿಯಾಗಿ ರಥೋತ್ಸವ ನಡೆಯಿತು.
ನಂತರ ಶ್ರೀಪಾದಂಗಳವರ ಶ್ರೀಮೂಲರಘುಪತಿ ವೇದವ್ಯಾಸದೇವರ ಪೂಜೆ, ಅಲಂಕಾರ ಹಾಗೂ ಹಸ್ತೋದಕ ಸಮರ್ಪಿಸಿದರು. ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.
ಶ್ರೀರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಂದ ಭಾಗಗಳಿಂದ ಅಪಾರ ಸಂಖ್ಯೆ ಭಕ್ತರು ಆಗಮಿಸಿ, ಆರಾಧನಾ ಮಹೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತುಂಗಭದ್ರಾ ನದಿಗೆ ಇಳಿಯದಂತೆ ಮುಂಜಾಗ್ರತಾ ಕ್ರಮಗಳನ್ನು ಶ್ರೀಮಠವು ತೆಗೆದುಕೊಂಡಿತು. ಭಕ್ತರಿಗೆ ಸ್ನಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವ ಕಾರಣ ಎಲ್ಲ ಭಕ್ತರಿಗೂ ರಾಯರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಶ್ರೀಮಠವು ಮಾಡಿತು.
ಶ್ರೀ ಗುರುರಾಯರ ಆರಾಧನೆಯಲ್ಲಿ ಪಾಲ್ಗೊಂಡ ನಟ ಜಗ್ಗೇಶ್: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ 354ನೇ ಮಧ್ಯಾರಾಧನೆ ಅಂಗವಾಗಿ ಸೋಮವಾರ ಕನ್ನಡ ಚಲನಚಿತ್ರ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ ಅವರು ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀರಾಯರ ದರ್ಶನ ಪಡೆದುಕೊಂಡರು. ನಟ ಜಗ್ಗೇಶ ಅವರನ್ನು ನೋಡಲು ಭಕ್ತರು ಮುಗಿಬಿದ್ದಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವುದು ಕಂಡುಬಂದಿತು.
ಆಗಸ್ಟ್ 12ರಂದು ಉತ್ತರ ಆರಾಧನೆ: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಉತ್ತರಾರಾಧನೆ – ತನ್ನಿಮಿತ್ತ ಪ್ರಾತಃಕಾಲ ಮಹಾರಥ, ಅಲಂಕಾರ, ಸ್ವಸ್ತಿ ವಾಚನಾದಿ ಕಾರ್ಯಕ್ರಮಗಳು ಮಂಗಳವಾರ ನಡೆಯಲಿವೆ. ಮಹೋತ್ಸವದ ಕೊನೆಯ ದಿನ ಉತ್ತರ ಆರಾಧನೆ ಮಾಡಲಾಗುವುದು. ಈ ದಿನದಂದು ಗುರುಗಳ ಸನ್ನಿಧಿಯಲ್ಲಿ ಪಾರಾಯಣ, ಮಹಾ ಪ್ರಸಾದ ವಿನಿಯೋಗ ಮತ್ತು ವಿದ್ವಾಂಸರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಮಹಾಮಂಗಳಾರತಿಯ ನಂತರ ಮಹೋತ್ಸವಕ್ಕೆ ತೆರೆ ಬೀಳಲಿದೆ.