ಪಣಜಿ: ಕಳೆದ 25 ವರ್ಷಗಳ ಹಿಂದೆ ಭಾರತದಿಂದ ನಿರ್ಮೂಲನಗೊಳಿಸಲಾಗಿದ್ದ `ನಾರು’ ಹಗ್ಗದ ರೀತಿಯಲ್ಲಿರುವ ಅಪಾಯಕಾರಿ ಜೀವಜಂತುವೊಂದು ಗೋವಾದಲ್ಲಿ ಪತ್ತೆಯಾಗಿದ್ದು ಆತಂಕ ಉಂಟುಮಾಡಿದೆ.
ಫೆಬ್ರವರಿ 2000ದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಡ್ರ್ಯಾಕ್ಯುಕ್ಯುಲಸ್ ಮೆಡಿನೆನ್ಸಿಸ್ ಎಂಬ ಹೆಸರಿನ ಈ ಜಂತು ಭಾರತದಲ್ಲಿ ಸಂಪೂರ್ಣ ನಿರ್ಮೂಲನವಾಗಿದೆ ಎಂದು ಘೋಷಿಸಿತ್ತು. ಆದರೆ ಇದೀಗ ಗೋವಾದ ಪೊಂಡಾ ತಾಲೂಕಿನ ಖಾಂಡೆಪಾರ್ ಗ್ರಾಮದ ನೀರಿನಲ್ಲಿ ಈ ಅಪಾಯಕಾರಿ ಜೀವ ಜಂತು ಪತ್ತೆಯಾಗಿದೆ.
ಇದರಿಂದಾಗಿ ನೀರನ್ನು ಕಾಯಿಸಿ ಕುದಿಸಿ ಕುಡಿಯಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ. ಒಂದು ಮೀಟರ್‌ಗಿಂತಲೂ ಉದ್ದವಾಗಿರುವ ಹಾಗೂ ಹಗ್ಗದಂತೆ ಕಂಡುಬರುವ ಈ ಜಂತು ಮಾನವನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಈ ಜಂತನ್ನು ತಜ್ಞರಿಗೆ ಕಳುಹಿಸಲಾಗಿದೆ ಎಂದು ಪೊಂಡಾ ಆರೋಗ್ಯಾಧಿಕಾರಿ ಡಾ. ಸ್ಮಿತಾ ಪಾರ್ಸೇಕರ್ ಮಾಹಿತಿ ನೀಡಿದ್ದಾರೆ. ಇನ್ನು ಗ್ರಾಮದಲ್ಲಿ ಹುಳುಗಳು ಅಸ್ತಿತ್ವದಲ್ಲಿವೆಯೇ ಅಥವಾ ಕಡ್ಸಾಲ್ ಉದ್ಯಾನದಲ್ಲಿ ಅವುಗಳನ್ನು ಹೋಲುವಂತಹ ಬೇರೆ ಏನಾದರೂ ಕಂಡುಬಂದಿದೆಯೇ ಎಂದು ತಿಳಿದುಕೊಳ್ಳಲು ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಪರಿಶೀಲನೆಗಾಗಿ ಕಳಿಸಲಾಗುವುದು ಎಂದು ಹೇಳಿದ್ದಾರೆ.
ಈ ಜಂತಿನಿಂದ ಡ್ರಾಕುನ್ಕ್ಯುಲಿಯಾಸಿಸ್ ಎಂಬ ರೋಗ ಬರುತ್ತಿದ್ದು ಈ ಜಂತಿಗೆ ಗಿನಿ ವೊರ್ಮ್ ಎಂಬುದಾಗಿಯೂ ಕರೆಯುತ್ತಾರೆ. ಮರಾಠಿ ಭಾಷೆಯಲ್ಲಿ ಈ ಜಂತಿಗೆ ನಾರು ಎಂದು ಕರೆಯುತ್ತಾರೆ. ನಾವು ಕುಡಿಯುವ ನೀರಿನೊಂದಿಗೆ ಈ ಜಂತಿನ ಮೊಟ್ಟೆಗಳು ಹೊಟ್ಟೆಯೊಳಗೆ ಸೇರಿದರೆ ಕಾಲಿಗೆ ಗಾಯಮಾಡಿ ಈ ಜೀವ ಜಂತು ಹೊರಗೆ ಬರುತ್ತದೆ.
ಡ್ರ್ಯಾಕ್ಯುಕ್ಯುಲಸ್ ಮೆಡಿನೆನ್ಸಿಸ್ ಎನ್ನುವ ಈ ಹುಳುವಿನಿಂದ ಡ್ರಾಕುನ್ಕ್ಯುಲಿಯಾಸಿಸ್ ಎಂಬ ಖಾಯಿಲೆ ಬರುತ್ತದೆ. ಕಲುಷಿತ ನೀರಿನ ಮೂಲಕ ಈ ಸೋಂಕು ಹರಡುತ್ತದೆ. ಸೋಂಕಿನಿಂದ ಮೊದಲಿಗೆ ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣವೆಂದರೆ ಗುಳ್ಳೆಗಳು, ಬಳಿಕ ಸಾಮಾನ್ಯವಾಗಿ ಕೆಳಗಿನ ಅಂಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮಾನವನ ಜೀವಕ್ಕೂ ಹಾನಿಯುಂಟು ಮಾಡುತ್ತದೆ. ಈ ಅಪಾಯಕಾರಿ ಜೀವ ಜಂತು ಗೋವಾದಲ್ಲಿ ಪತ್ತೆಯಾಗಿದೆ.
ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ 25 ರಿಂದ 30 ವರ್ಷಗಳ ಹಿಂದೆ ಡ್ರಾಕುನ್ಕ್ಯುಲಿಯಾಸಿಸ್ ಇತ್ತು ಎಂದು ಮೂಲಗಳು ತಿಳಿಸಿವೆ. ಪರಿಸರ ಪ್ರೇಮಿ ಸಂದೀಪ ಪಾರಕರ್ ಈ ಜಂತುವನ್ನು ವೀಕ್ಷಿಸಿದ್ದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. “ಮಳೆ ನೀರಿನೊಂದಿಗೆ ಹುಳು ತೋಟಕ್ಕೆ ಬಂದಿರಬಹುದು. ನನ್ನ ಪತ್ನಿ ಅದನ್ನು ನೋಡಿ, ಅದು ದಾರ ಎಂದು ಭಾವಿಸಿದ್ದಳು. ಆದರೆ ಅದನ್ನು ಮುಟ್ಟಿದಾಗ ಚಲಿಸಲು ಪ್ರಾರಂಭಿಸಿತು” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಆಫ್ರಿಕಾ ಮತ್ತು ಏಷ್ಯಾದ 20 ದೇಶಗಳಲ್ಲಿ ಲಕ್ಷಾಂತರ ಜನರನ್ನು ಈ ಸೋಂಕು ಬಾಧಿಸಿತ್ತು ಎಂದು ಹೇಳಲಾಗಿದೆ. ಅಲ್ಲದೇ ನಾಯಿ, ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳಿಗೆ ಈ ಸೋಂಕು ಬಾಧಿಸಿತ್ತು ಎಂಬ ಅಂಶವನ್ನು ಇಟ್ಟುಕೊಂಡು ಸಂಶೋಧನೆ ಕೈಗೊಳ್ಳಲಾಗಿತ್ತು. 2000ರಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳು ಈ ಹುಳುವಿನ ಹರಡುವಿಕೆಯಿಂದ ಮುಕ್ತವಾಗಿವೆ ಎಂದು ಹೇಳಲಾಗಿತ್ತು.