ಶಿವಮೊಗ್ಗ: ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ, ವರ್ಷದ ಎಲ್ಲಾ ಸಮಯದಲ್ಲಿಯೂ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ತಾಣ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ. ಜಿಲ್ಲೆಯ ಪ್ರವಾಸ ಕೈಗೊಳ್ಳುವ ಜನರಿಗೆ ಸಿಹಿಸುದ್ದಿಯೊಂದಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಈ ಕುರಿತು ಮಾತನಾಡಿದ್ದಾರೆ. ಸೆಪ್ಟೆಂಬರ್ 22ರಂದು ಆಚರಿಸಲು ಉದ್ದೇಶಿಸಲಾಗಿರುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜನಮನ ಸೆಳೆಯುವ ನಿಟ್ಟಿನಲ್ಲಿ ರೂಪಿಸಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
“ಜೋಗದ ಜಲಪಾತ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಹಾಗೂ ಈವರೆಗೆ ಗುರುತಿಸಲು ಸಾಧ್ಯವಾಗದೇ ಅಜ್ಞಾತವಾಗಿರುವ ಎಲ್ಲಾ ಪ್ರವಾಸಿ ತಾಣಗಳನ್ನು ಜಗತ್ತಿಗೆ ಪರಿಚಯಿಸುವ ಸದುದ್ದೇಶದಿಂದ ಸ್ಥಳೀಯ ಸಂಸ್ಥೆಗಳು, ಆಸಕ್ತರನ್ನೊಳಗೊಂಡು ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಜನಸಾಮಾನ್ಯರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ” ಎಂದರು.
ಪ್ರವಾಸೋದ್ಯಮ ಅಭಿವೃದ್ಧಿ: ಜಿಲ್ಲಾಧಿಕಾರಿಗಳು, “ಈಗಾಗಲೇ ಗುರುತಿಸಲಾಗಿರುವ ಸ್ಥಳಗಳಿಗೆ ಪ್ರವಾಸಿಗರು ಹೋಗಿ ಬರಲು ಅನುಕೂಲವಾಗುವಂತೆ ಹಾಗೂ ಪ್ರವಾಸಿ ತಾಣಗಳಿಗೆ ಅಗತ್ಯ ಮೂಲಭೂತ ಸೌಕರ್ಯ, ರಸ್ತೆ ಸಂಚಾರ, ಮಾಹಿತಿಯುಕ್ತ ಪ್ರಚಾರಫಲಕ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ” ಎಂದು ಹೇಳಿದರು.
“ಜಿಲ್ಲೆಯ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಈಗಾಗಲೇ 120 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಮಾನ್ಯ ಸಚಿವರು ಜಿಲ್ಲೆಯ ವಿಕಾಸಕ್ಕೆ ಪೂರಕವಾಗಿ ಈ ಯೋಜನೆಗೆ ಸರ್ಕಾರದಿಂದ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಉನ್ನತಿಗೆ ವಿಫುಲ ಅವಕಾಶಗಳಿರುವುದನ್ನು ಗಮನಿಸಲಾಗಿದೆ. ರಾಜ್ಯದ ಇತರೆ ಪ್ರವಾಸಿ ಕ್ಷೇತ್ರಗಳಂತೆ ಜಿಲ್ಲೆಯನ್ನು ರೂಪಿಸಬೇಕಾದ ಅಗತ್ಯವಿದೆ. ಇದರಿಂದಾಗಿ ವಿಶ್ವದ ಭೂಪಟದಲ್ಲಿ ಜಿಲ್ಲೆಯ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಬಹುದಾಗಿದೆ. ಅಲ್ಲದೇ ಇಲ್ಲಿನ ಜನರ ಜೀವನ ಗುಣಮಟ್ಟದ ಸುಧಾರಣೆ ಕಂಡುಕೊಳ್ಳಬಹುದಾಗಿದೆ” ಎಂದರು.
“ರಾಜ್ಯದ ಹೃದಯಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಮತ್ತು ಕ್ರೀಡೆ-ಸಾಹಸಕ್ಕೆ ಮಹತ್ವ ಪಡೆದುಕೊಂಡಿದೆ. ವಿಶ್ವವಿಖ್ಯಾತ ಜೋಗ-ಜಲಪಾತದಿಂದ ಆಗುಂಬೆಯ ಸೂರ್ಯಾಸ್ತದವರೆಗಿನ ಅನೇಕ ವಿಷಯಗಳಿಗೆ ಸದಾ ಜೀವಂತವಾಗಿದೆ” ಎಂದು ತಿಳಿಸಿದರು.
“ಇಲ್ಲಿನ ಹಲವು ಉಸಿರು ಬಿಗಿಹಿಡಿಯುವ ಕಡಿದಾದ ಕಣಿವೆಗಳು, ರೋಮಾಂಚಕ ಸಾಹಸ-ಕ್ರೀಡೆಗಳಿಗೆ ಜಿಲ್ಲೆ ಸದಾ ನೆನಪಿನಲ್ಲಿ ಉಳಿಯಲಿದೆ. ಇಲ್ಲಿನ ಪ್ರವಾಸಿ ತಾಣಗಳು, ಮಂದಿರ-ಮಸೀದಿ-ಚರ್ಚುಗಳು, ಐತಿಹಾಸಿಕ ಸ್ಥಳಗಳು, ಕವಿ-ಕಲಾವಿದರು, ಸಾಹಿತ್ಯ, ನೃತ್ಯ ಸಂಗೀತ ಕ್ಷೇತ್ರದ ಸಾಧಕರು, ನದಿ-ನಾಲೆ-ಜಲಪಾತಗಳು, ತಪ್ಪಲು ಪ್ರದೇಶಗಳು ಮತ್ತಿತರ ವಿವರಗಳನ್ನು ಸಚಿತ್ರವಾಗಿ ಸಾಮಾಜಿಕ ಜಾಲತಾಣಗಳು ಮತ್ತಿತರ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಜಿಲ್ಲೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದೆ” ಎಂದು ಹೇಳಿದರು.
“ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಜಿಲ್ಲೆಯ ವೆಬ್‌ಸೈಟನ್ನು ವಿನ್ಯಾಸಗೊಳಿಸಿ, ಸೆಪ್ಟಂಬರ್ 22ರಂದು ಲೋಕಾರ್ಪಣೆಗೊಳಿಸಲಾಗುವುದು. ಈಗಾಗಲೇ ಗುರುತಿಸಲಾಗಿರುವ 60ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರಚಾರ ಫಲಕ, ಕಿರುಮಾಹಿತಿ, ಮಾರ್ಗಗಳ ವಿವರಗಳನ್ನು ಅಳವಡಿಸಲಾಗುವುದು. ಜಿಲ್ಲೆಯ ಅಧಿಕೃತ, ನಂಬಿಕಾರ್ಹ, ಮಾಹಿತಿಯುಕ್ತ ವೆಬ್‌ಸೈಟ್‌ನ್ನು ಆರಂಭಿಸಿ, ಜಿಲ್ಲೆಯ ಛಾಯಾಚಿತ್ರ ಸಹಿತ ಸಮಗ್ರ ಮಾಹಿತಿ, ಐತಿಹಾಸಿಕ ಸ್ಥಳಗಳು, ಸ್ಥಳ ಐತಿಹ್ಯಗಳು, ವ್ಯಕ್ತಿಚಿತ್ರಗಳು, ವನ್ಯಜೀವಿಗಳು, ಹೋಂ ಸ್ಟೇ, ವಸತಿ ಗೃಹಗಳು, ಊಟೋಪಹಾರ, ಮತ್ತಿತರ ವಿಶೇಷತೆಗಳು, ನದಿ-ನಾಲೆ ಜಲಪಾತಗಳು, ತಪ್ಪಲು ಪ್ರದೇಶಗಳು, ಸ್ಥಳದಿಂದ ಸ್ಥಳಕ್ಕೆ ಇರುವ ದೂರ, ಕಾಲಮಾನಕ್ಕನುಗುಣವಾಗಿ ಬದಲಾಗುವ ವಿಶೇಷಗಳನ್ನೊಳಗೊಂಡಂತೆ ಮಾಹಿತಿಯನ್ನು ಒದಗಿಸಲಾಗುವುದು” ಎಂದು ಜಿಲ್ಲಾಧಿಕಾರಿಗಳು ವಿವರಣೆ ಕೊಟ್ಟರು.