ENG vs IND Test: ಟೀಮ್‌ ಇಂಡಿಯಾಗೆ ಅಭಿನಂದಿಸಿ, ಕ್ಷಮೆ ಯಾಚಿಸಿದ ತರೂರ್

0
96

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಟೀಮ್‌ ಇಂಡಿಯಾವನ್ನು ಕಾಂಗ್ರೆಸ್‌ ಸಂಸದ ಶಸಿ ತರೂರ್‌ ಶ್ಲಾಘಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ಮಾತು ಸಾಲುತ್ತಿಲ್ಲ. ಅದ್ಭುತವಾದ ಗೆಲುವು! ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವಿನಲ್ಲಿ ಟೀಮ್ ಇಂಡಿಯಾ ತಂಡಕ್ಕೆ ಅತ್ಯಂತ ಉತ್ಸಾಹ ಮತ್ತು ಹರ್ಷ! ಪ್ರದರ್ಶಿಸಿದ ಧೈರ್ಯ, ದೃಢನಿಶ್ಚಯ ಮತ್ತು ಉತ್ಸಾಹ ಅದ್ಭುತವಾಗಿತ್ತು. ಈ ತಂಡ ವಿಶೇಷವಾಗಿದೆ” ಎಂದು ಮೆಚ್ಚುಗೆಯ ಮಾತುಗಳನ್ನು ತರೂರ್ ಹೇಳಿದ್ದಾರೆ.

ಅಲ್ಲದೇ ಅದೇ ಸಂದೇಶದಲ್ಲಿ ಟೀಮ್‌ ಇಂಡಿಯಾಕ್ಕೆ ಕ್ಷಮೆಯನ್ನೂ ಯಾಚಿಸಿರುವ ಅವರು, “ನಿನ್ನೆ ಫಲಿತಾಂಶದ ಬಗ್ಗೆ ನಾನು ಅನುಮಾನ ವ್ಯಕ್ತಪಡಿಸಿದ್ದಕ್ಕೆ ವಿಷಾದಿಸುತ್ತೇನೆ. ಆದರೆ, ಮೊಹಮ್ಮದ ಸಿರಾಜ್‌ ಎಂದಿಗೂ ತಮ್ಮ ಮೇಲಿನ ನಂಬಿಕೆಯನ್ನು ನಿಲ್ಲಿಸಲು ಅವಕಾಶವನ್ನು ನೀಡಲಿಲ್ಲ.! ನಮ್ಮ ವೀರರಿಗೆ ಶಹಬ್ಬಾಸ್” ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ವಿರಾಟ್‌ ಕೊಹ್ಲಿ ಕುರಿತು ಬರೆದುಕೊಂಡಿರುವ ತರೂರ್‌, “ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರನ್ನು ಹಲವು ಬಾರಿ ಮಿಸ್ ಮಾಡಿಕೊಂಡಿದ್ದೇನೆ. ಆದರೆ, ಇಂಗ್ಲೆಂಡ್‌ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ವೇಳೆ ಮಿಸ್ ಮಾಡಿಕೊಂಡಷ್ಟು ಎಂದಿಗೂ ಮಿಸ್ ಮಾಡಿಕೊಂಡಿರಲಿಲ್ಲ. ಅವರ ಧೈರ್ಯ, ಆಟದ ತೀವ್ರತೆ, ಮೈದಾನದಲ್ಲಿ ಅವರ ಸ್ಫೂರ್ತಿದಾಯಕ ಉಪಸ್ಥಿತಿ, ಅವರಲ್ಲಿರುವ ಅಪಾರವಾದ ಬ್ಯಾಟಿಂಗ್ ಕೌಶಲಗಳು, ಇಡೀ ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲ ತಾಕತ್ತು ಅವರಲ್ಲಿ ಇತ್ತು. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆಯಲು ತಡವಾಯಿತೇ? ವಿರಾಟ್, ದೇಶಕ್ಕೆ ನಿಮ್ಮ ಅವಶ್ಯಕತೆ ಇದೆ!” ಎಂದು ಅವರು ಬರೆದುಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಕ್ರಿಕೆಟ್‌ ಟ್ರೋಫಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಂಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ 373 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನು 6 ರನ್‌ಗಳು ಬಾಕಿ ಇರುವಂತೆಯೇ ಸರ್ವ ಪತನ ಕಂಡಿದೆ. ಅಂತಿಮವಾಗಿ ಇಂಗ್ಲೆಂಡ್‌ 367 ರನ್‌ಗಳಿಗೆ 10 ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಪಂದ್ಯದ ಐದನೇ ದಿನವಾದ ಇಂದು ಇಂಗ್ಲೆಂಡ್‌ಗೆ ಗೆಲ್ಲಲು 35 ರನ್ ಅವಶ್ಯವಿದ್ದರೆ, ಇತ್ತ ಟೀಂ ಇಂಡಿಯಾ ಗೆಲುವಿಗೆ 4 ವಿಕೆಟ್​ಗಳು ಬಾಕಿ ಇದ್ದವು. ಅದರಂತೆ ಐದನೇ ದಿನದಾಟ ಆರಂಭವಾಗುತ್ತಿದ್ದಂತೆ ಭಾರತೀಯ ಬೌಲರ್‌ಗಳ ದಾಳಿಗೆ ಇಂಗ್ಲೆಂಡ್‌ ನಲುಗಿದೆ. ಟೀಂ ಇಂಡಿಯಾ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಆಲೌಟ್ ಮಾಡುವ ಮೂಲಕ ವೀರೋಚಿತ ಗೆಲುವು ಸಾಧಿಸಿತು.

ಒಟ್ಟಾರೆ ಎರಡೂ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ರನ್‌ ಗಳಿಸಲು ಪರದಾಡುವಂತೆ ಮಾಡಿದರು. ಅಂತಿಮ ದಿನದಲ್ಲಿ ಇಂಗ್ಲೆಂಡ್‌ ಗೆಲುವಿಗೆ ಕೇವಲ 35 ರನ್‌ ಅವಶ್ಯವಿದ್ದಾಗ ಇನ್ನೂ 4 ವಿಕೆಟ್‌ಗಳು ಬಾಕಿ ಇದ್ದವು. ಬಹುಶಃ ಇಂಗ್ಲೆಂಡ್‌ ಗೆಲುವು ಸುಲಭ ಎಂದುಕೊಂಡಿದ್ದವರಿಗೆ ಮೊಹಮ್ಮದ್‌ ಸಿರಾಜ್‌ ಶಾಕ್‌ ಕೊಟ್ಟರು. ಭಾರತ ಗೆಲುವಿಗೆ ಬೇಕಿದ್ದ ನಾಲ್ಕು ವಿಕೆಟ್‌ಗಳ ಪೈಕಿ ಮೂರು ವಿಕೆಟ್‌ಗಳನ್ನು ಸಿರಾಜ್‌ ಉರುಳಿಸಿದರು.

Previous articleಅಗಲಿದ ಸಹೋದರನಿಗೆ ಸ್ಮಶಾನದಲ್ಲಿಯೇ ರಕ್ಷಾಬಂಧನ
Next articleKSRTC: ಸಾರಿಗೆ ನೌಕರರ ಮುಷ್ಕರ ಫಿಕ್ಸ್

LEAVE A REPLY

Please enter your comment!
Please enter your name here