ಮುಂಬೈ: ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಅವರು ಭಾರತ ಕ್ರಿಕೆಟ್ ದಿಗ್ಗಜರೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಡಲಿದ್ದಾರೆ ಎಂದು ವರದಿಯಾಗಿದೆ.
ಬರೋಬ್ಬರಿ 14 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸುತ್ತಿರುವ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಭಾರತ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಕ್ರಿಕೆಟ್ ಪಂದ್ಯ ಆಡಲಿದ್ದಾರೆ.
ಡಿಸೆಂಬರ್ 13 ರಿಂದ ಮೂರು ದಿನಗಳ ವರೆಗೆ ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 7 ಆಟಗಾರರ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ.
ಡಿಸೆಂಬರ್ 13 ರಿಂದ 15 ರವರೆಗೆ ಅವರು ನವದೆಹಲಿ, ಕೋಲ್ಕತ್ತಾ ಹಾಗೂ ಮುಂಬೈಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 14ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಮೆಸ್ಸಿ ಆಗಮಿಸಲಿದ್ದಾರೆ. ಈ ವೇಳೆ ಭಾರತದ ಕ್ರಿಕೆಟಿಗರೊಂದಿಗೆ ಕ್ರಿಕೆಟ್ ಪಂದ್ಯ ಆಯೋಜಿಸುವ ಸಾಧ್ಯತೆಯಿದೆ.
ಈಗಾಗಲೇ ಕಾರ್ಯಕ್ರಮ ಆಯೋಜಕ ಸಂಸ್ಥೆಯೊಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ಗೆ ಪಂದ್ಯ ಆಯೋಜಿಸುವ ಕುರಿತಂತೆ ಮನವಿ ಮಾಡಿದೆ. ಅಂದುಕೊಂಡತೆ ಎಲ್ಲವೂ ನಡೆದರೆ ಆಯೋಜಕರು ಸಂಪೂರ್ಣ ವೇಳಾಪಟ್ಟಿ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಲಿಯೋನೆಲ್ ಮೆಸ್ಸಿ ಅವರದ್ದು ಇದು ಎರಡನೇ ಭೇಟಿಯಾಗಿದೆ. ಈ ಮೊದಲು 2011 ರಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಆಡಲೆಂದು ಅವರು ಭಾರತಕ್ಕೆ ಬಂದಿದ್ದರು. ಆಗ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಆ ಪಂದ್ಯವನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು. ಇದಾದ ಬಳಿಕ ಮತ್ತೆ ಸುದೀರ್ಘ 14 ವರ್ಷಗಳ ನಂತರ ಬಾರಿಗೆ ಭಾರತಕ್ಕೆ ಮೆಸ್ಸಿ ಭೇಟಿ ನೀಡಲಿದ್ದಾರೆ.
ಫುಟ್ಬಾಲ್ ಕಾರ್ಯಾಗಾರ: ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸದಲ್ಲಿ ಕೋಲ್ಕತ್ತಾ ಭೇಟಿ ಕೂಡ ಒಂದಾಗಿದ್ದು, ಕೋಲ್ಕತ್ತಾದಲ್ಲಿ ಮಕ್ಕಳಿಗಾಗಿ ಫುಟ್ಬಾಲ್ ಕಾರ್ಯಾಗಾರ ಆಯೋಜಿಸಿದ್ದಾರೆ. ಅಲ್ಲದೇ ಮೆಸ್ಸಿ ಗೌರವಾರ್ಥವಾಗಿ ‘ಗೋಟ್ ಕಪ್’ ಪಂದ್ಯಾವಳಿ ಕೂಡ ಆಯೋಜಿಸಿದೆ.
ಈಗಾಗಲೇ ಅರ್ಜೆಂಟೀನಾ ಫುಟ್ಬಾಲ್ ಅಸೋಸಿಯೇಷನ್ ಜತೆಗೆ ಕೇರಳ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಮೇರೆಗೆ ಲಾ ಅಲ್ಬಿಸೆಲೆಸ್ಟೆ ಒಳಗೊಂಡ ಎರಡು ಪಂದ್ಯಗಳನ್ನು ಕೇರಳದಲ್ಲಿ ಆಯೋಜಿಸಲಿದೆ ಎಂದು ಕೇರಳ ರಾಜ್ಯದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ತಿಳಿಸಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಎನಿಸಿಕೊಂಡಿರುವ ಲಿಯೋನೆಲ್ ಮೆಸ್ಸಿ, ಜಾಗತಿಕ ಫುಟ್ಬಾಲ್ ಐಕಾನ್ ಆಗಿದ್ದಾರೆ. ಅರ್ಜೆಂಟೀನಾದಲ್ಲಿ 1987 ರಲ್ಲಿ ಜನಿಸಿರುವ 38 ವರ್ಷದ ಮೆಸ್ಸಿ 800 ಕ್ಕೂ ಹೆಚ್ಚು ಕ್ಲಬ್ ಪಂದ್ಯಗಳನ್ನು ಆಡಿದ್ದಾರೆ. ಹಾಗೂ 700 ಗೋಲುಗಳನ್ನು ಬಾರಿಸಿದ್ದಾರೆ. ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.