ವಾಸುದೇವ ಉಡಳ್ಳಿ
ಕಾರವಾರ: ಕಳೆದ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ, ಕರಾವಳಿ ಮತ್ತು ಮಲೆನಾಡು ಭಾಗದ ಜನರ ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಇದೀಗ ನನಸಾಗುವ ಕಾಲ ಸನ್ನಿಹಿತವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಅಂಕೋಲಾ – ಹುಬ್ಬಳ್ಳಿ ಜೋಡಿ ಮಾರ್ಗಕ್ಕೆ ಮಂಜೂರಾತಿ ನೀಡಿರುವುದಾಗಿ ಖುದ್ದು ಹೇಳಿಕೆ ನೀಡಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ.
163 ಕಿ.ಮೀ. ದೂರದ ಹುಬ್ಬಳ್ಳಿ-ಅಂಕೋಲಾ ಜೋಡಿ ಮಾರ್ಗಕ್ಕೆ ಮಂಜೂರಾತಿ ದೊರೆತಿದ್ದು, ಯೋಜನೆಗೆ ಇದ್ದ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ಯೋಜನೆಯ ಮಾರ್ಗದ ಮರು ಸಮೀಕ್ಷೆ ಪೂರ್ಣಗೊಂಡಿದ್ದು, ಅಗತ್ಯವಾದ ಯೋಜನಾ ವರದಿ ಸಹ ಸಲ್ಲಿಕೆಯಾಗಿದೆ. ಈ ಮಹತ್ವದ ಯೋಜನೆಗೆ ಸುಮಾರು 17 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ದಶಕಗಳ ಹೋರಾಟ, ಅಡೆತಡೆಗಳು: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಕೇವಲ ಒಂದು ಸಾರಿಗೆ ಯೋಜನೆಯಾಗಿರದೆ, ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಸೇತುವೆಯಾಗಿ ಕಾಣಲಾಗುತ್ತಿದೆ. ಆದಾಗ್ಯೂ, ಈ ಯೋಜನೆಗೆ ಕಳೆದ ಎರಡು ದಶಕಗಳಿಂದ ವಿವಿಧ ಕಾರಣಗಳಿಂದ ಅಡೆತಡೆಗಳು ಎದುರಾಗಿದ್ದವು. ಪ್ರಮುಖವಾಗಿ, ಯೋಜನೆ ಹಾದುಹೋಗುವ ಪ್ರದೇಶವು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವಲಯದಲ್ಲಿ ಬರುವುದರಿಂದ ಪರಿಸರ ಕಾರಣಗಳು ತೀವ್ರ ವಿರೋಧಕ್ಕೆ ಕಾರಣವಾಗಿದ್ದವು. ಪರಿಸರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಯೋಜನೆಯಿಂದಾಗುವ ಅರಣ್ಯನಾಶ ಮತ್ತು ಜೀವವೈವಿಧ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಸುದೀರ್ಘ ಹೋರಾಟ ನಡೆಸಿದ್ದರು. ಇದರ ಪರಿಣಾಮವಾಗಿ, ಯೋಜನೆ ಹಲವು ಬಾರಿ ಅನುಮತಿ ದೊರೆಯದೆ ನನೆಗುದಿಗೆ ಬಿದ್ದಿತ್ತು.
ಪ್ರಮುಖ ಬೆಳವಣಿಗೆಗಳು: 2000ರ ದಶಕದ ಆರಂಭದಲ್ಲಿ ಯೋಜನೆಯ ಮೊದಲ ಪ್ರಸ್ತಾವನೆ ಮತ್ತು ಸಮೀಕ್ಷಾ ಕಾರ್ಯ ಆರಂಭವಾಗಿತ್ತು. ಬಳಿಕ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮತೆಯ ಕಾರಣದಿಂದ ಯೋಜನೆಯು ತೀವ್ರ ವಿರೋಧ ಎದುರಿಸಿತು. ನಂತರ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸ್ಥಳೀಯರು ಮತ್ತು ವಿವಿಧ ಸಂಘಟನೆಗಳಿಂದ ನಿರಂತರ ಹೋರಾಟಗಳು, ಪ್ರತಿಭಟನೆಗಳು ನಡೆದಿದ್ದವು. ಬಳಿಕ ಪರಿಸರ ಅನುಮತಿಗಳನ್ನು ಪಡೆಯುವ ನಿಟ್ಟಿನಲ್ಲಿ ಯೋಜನೆಗೆ ಸಂಬಂಧಿಸಿದ ಹಲವು ಸಮೀಕ್ಷೆಗಳು ಮತ್ತು ಪರಿಶೀಲನೆಗಳು ನಡೆದು ಮಾರ್ಗ ಬದಲಾವಣೆ ಮತ್ತು ಸುರಂಗ ಮಾರ್ಗಗಳಂತಹ ಪರ್ಯಾಯಗಳನ್ನೂ ಪರಿಗಣಿಸಲಾಯಿತು.
ಪ್ರಸ್ತುತ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಇತ್ತೀಚಿನ ಹೇಳಿಕೆ, ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಯೋಜನೆಗೆ ಅಂತಿಮವಾಗಿ ಹಸಿರು ನಿಶಾನೆ ದೊರೆತಿರುವುದನ್ನು ಖಚಿತಪಡಿಸಿದ್ದು, ಕರಾವಳಿ ಹಾಗೂ ಮಲೆನಾಡಿನ ಜನರಲ್ಲಿ ಆಶಾಭಾವ ಮೂಡಿದೆ.
ಈ ಮಂಜೂರಾತಿಯೊಂದಿಗೆ, ಯೋಜನೆಯು ಶೀಘ್ರವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಒಮ್ಮೆ ಈ ರೈಲ್ವೆ ಮಾರ್ಗ ಕಾರ್ಯಾರಂಭ ಮಾಡಿದರೆ, ಇದು ಕರಾವಳಿ ಬಂದರುಗಳನ್ನು ಉತ್ತರ ಕರ್ನಾಟಕದ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಲಿದೆ. ಇದು ಸರಕು ಸಾಗಣೆ, ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡಲಿದೆ. ದಶಕಗಳ ಕನಸು ನನಸಾಗುವತ್ತ ಸಾಗುತ್ತಿರುವ ಈ ಬೆಳವಣಿಗೆ, ಇಡೀ ಪ್ರದೇಶಕ್ಕೆ ಹೊಸ ಭರವಸೆಯನ್ನು ಮೂಡಿಸಿದೆ.
ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮಾತನಾಡಿ, ಹುಬ್ಬಳ್ಳಿ – ಅಂಕೋಲಾ ರೈಲ್ವೆ ಮಾರ್ಗ ಮಂಜೂರಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ಈ ಭಾಗದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಜನತೆಯ ಬಹುಕಾಲದ ಕನಸು ಈ ರೈಲ್ವೆ ಮಾರ್ಗದ್ದಾಗಿತ್ತು. ಈ ರೈಲ್ವೆ ಮಾರ್ಗಕ್ಕಾಗಿ ಹಲವರು ಸುದೀರ್ಘ ಹೋರಾಟ, ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರ ಒತ್ತಾಸೆಯೂ ಇತ್ತು. ಕೇಂದ್ರ ಸಚಿವರ ಹೇಳಿಕೆಯಿಂದ ಎಲ್ಲರ ಹೋರಾಟಕ್ಕೆ ಜಯ ಸಂದಂತಾಗಿದೆ ಎಂದು ಹೇಳಿದ್ದಾರೆ.
ಹೆಬ್ಬಾರ್ ಸಂತಸ: ಕರ್ನಾಟಕ ರಾಜ್ಯದಲ್ಲಿ ರೈಲು ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಬಹುನಿರೀಕ್ಷಿತ ಅಂಕೋಲಾ – ಹುಬ್ಬಳ್ಳಿ (163 ಕಿ.ಮೀ) ಜೋಡಿ ಮಾರ್ಗ ರೈಲು ಯೋಜನೆ ಮಂಜೂರಾಗಿರುವುದು ನಮ್ಮೆಲ್ಲರಿಗೂ ಅತ್ಯಂತ ಸಂತಸದ ವಿಷಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಭಾರತೀಯ ರೈಲ್ವೆ ಇಲಾಖೆ ಸುಮಾರು 42,517 ಕೋಟಿ ವೆಚ್ಚದ 3,264 ಕಿ.ಮೀ ಉದ್ದದ 25 ಮಹತ್ವದ ಯೋಜನೆಗಳನ್ನು ಘೋಷಿಸಿರುವುದು ಅಭಿನಂದನೀಯವಾಗಿದೆ. ರಾಜ್ಯ ಸಭೆಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಕೇಂದ್ರ ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಈ ಯೋಜನೆಗೆ ಅನುಮೋದನೆ ಲಭಿಸಿರುವುದಾಗಿ ತಿಳಿಸಿದರು. ಈ ಮೂಲಕ ಸಾವಿರಾರು ಜನರ ಬಹುಕಾಲದ ಕನಸುಗಳಿಗೆ ವೇದಿಕೆ ಕಲ್ಪಿಸಿರುವ ಐತಿಹಾಸಿಕ ಘೋಷಣೆ ಇದಾಗಿದೆ ಎಂದಿದ್ದಾರೆ.
ಈ ಯೋಜನೆಯಿಂದ ಕರಾವಳಿ ಮತ್ತು ಉತ್ತರ ಕರ್ನಾಟಕದ ನಡುವೆ ವೇಗ ಮತ್ತು ನೇರ ಸಂಪರ್ಕ ಸ್ಥಾಪನೆಯಾಗಲಿದೆ. ವಾಣಿಜ್ಯೋದ್ಯಮ, ಲಾಜಿಸ್ಟಿಕ್ಸ್ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಹೊಸ ಶಕ್ತಿ ಸಿಗಲಿದೆ. ಈ ಮಹತ್ವಾಕಾಂಕ್ಷಿ ರೈಲು ಯೋಜನೆಯನ್ನು ಮಂಜೂರು ಮಾಡಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಮತ್ತು ಈ ಯೋಜನೆಗಾಗಿ ಶ್ರಮಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಈ ಭಾಗದ ಜನರ ಪರವಾಗಿ ಅಭಿನಂದನೆ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.