10 ವರ್ಷದಿಂದ ನೀರಿನಲ್ಲೇ ಸಂಚಾರ: ಶಾಸಕರಿಗೆ ಕೇಳಿಲ್ಲ ಕುಮಟಾದ ಸೋಕನಮಕ್ಕಿ ಜನರ ಕೂಗು!

0
64

ದಾಂಡೇಲಿ: ಮಳೆಗಾಲ ಬಂತೆಂದರೆ ರಸ್ತೆಯ ಮೇಲೆ 3-4 ಅಡಿಗಳಷ್ಟು ಎತ್ತರಕ್ಕೆ ನಿಲ್ಲುವ ನೀರು. ಶಾಲಾ-ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದಿಟ್ಟುಕೊಂಡು ಹೋಗುವ ಪರಿಸ್ಥಿತಿ. ಇದು ಕುಮಟಾ ಪಟ್ಟಣದ ಹೆರವಟ್ಟಾ ಸಮೀಪದ ಸೋಕನಮಕ್ಕಿ ಗ್ರಾಮದ ರಸ್ತೆಯ ಸ್ಥಿತಿ.

ಮಳೆಗಾಲ ಬಂತೆಂದರೆ ಇಲ್ಲಿಯ ಜನರ ಪಾಡು ಹೇಳತೀರದು. ಕಳೆದ ಮಳೆಗಾಲದಲ್ಲಿ ಶವ ಸಾಗಿಸಲಾಗದೇ ರಸ್ತೆ ತುಂಬಿ ಹರಿದ ನೀರಿನಲ್ಲಿ ಇಲ್ಲಿಯ ನಿವಾಸಿಗಳು ಪರದಾಡಿದ್ದು ಸುದ್ದಿಯಾಗಿತ್ತು. ಮಳೆ ಬಂದರೆ ಸುತ್ತಲಿನ ಗುಡ್ಡಗಳಿಂದ ಹರಿದು ಬರುವ ನೀರು ರಸ್ತೆಯ ಮೇಲೆ 3-4 ಅಡಿ ನಿಂತು ಬಿಡುತ್ತದೆ. ರಸ್ತೆಯಲ್ಲಿ ಹಾದು ಹೋಗಲು ಪರದಾಡುವ ಸ್ಥಿತಿ ಇಲ್ಲಿ ಸಾಮಾನ್ಯವಾದಂತಾಗಿದೆ.

ಮಣ್ಣಿನ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆ ಎತ್ತರಿಸಿ ಚರಂಡಿ ನಿರ್ಮಿಸಬೇಕಾದ ವಾಲಗಳ್ಳಿಯ ಗ್ರಾಮ ಪಂಚಾಯತಿ ಕಾಟಾಚಾರಕ್ಕೆ ಜೆಸಿಬಿ ತಂದು ಇದ್ದ ರಸ್ತೆಯನ್ನು ಮತ್ತಷ್ಟು ಹದಗೆಡಿಸಿ ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡಿದೆ. ಈ ಭಾಗದ ಶಾಸಕರಿಗೆ ಹಿಂದುಳಿದ ಜನಾಂಗದ ಹಾಲಕ್ಕಿ ಗೌಡರು ತಮಗೆ ಮತ ನೀಡುವುದಿಲ್ಲ ಎನ್ನುವ ಕಾರಣಕ್ಕೆ ದಿವ್ಯ ನಿರ್ಲಕ್ಷ ತೋರಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಇಲ್ಲಿಯ ಜನರು ಈ ರಸ್ತೆ ನಿರ್ಮಿಸಿ ಪ್ರತಿ ಮಳೆಗಾಲದಲ್ಲಿ ತಮಗೆ ಉಂಟಾಗುತ್ತಿರುವ ತೊಂದರೆ ಪರಿಹರಿಸಿ ಎಂದು ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲರಿಗೂ ಮನವಿ ನೀಡುತ್ತಲೇ ಬಂದಿದ್ದಾರೆ. ಆದರೆ, ಭರವಸೆ ನೀಡಿದ ಅಧಿಕಾರಿಗಳು ಹಿಂದೆ ಸರಿಯುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಇಲ್ಲಿಯ ಜನರು ಹೇಳುತ್ತಿದ್ದಾರೆ.

ಪ್ರತಿ ವರ್ಷ ಇದೇ ಗೋಳು: ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ತಾಲೂಕಾಡಳಿತಕ್ಕೆ ಮಳೆ ನೀರು ನಿಂತಿರುವ ಈ ಸಂದರ್ಭದಲ್ಲಿ ಪರಿಶೀಲಿಸಿ ಬರುವ ದಿನಗಳಲ್ಲಿ ರಸ್ತೆ ನಿರ್ಮಾಣ, ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ವಾಲಗಳ್ಳಿ ಪಂಚಾಯತಿಯ ಪಿ.ಡಿ.ಓ. ಅವರನ್ನು ಕೇಳಿದರೆ ಅನುದಾನದ ಕೊರತೆ ಇದೆಯೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಯೇ ಹೊರತು ಯಾವುದಾದರೂ ಯೋಜನೆಯಲ್ಲಿ ಸೂಕ್ತ ಪ್ರಸ್ತಾವನೆ, ಎಷ್ಟಿಮೇಟ್ ಮಾಡಿ ಕಳಿಸುತ್ತಿಲ್ಲ. ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಇದನ್ನು ಗಮನಿಸಿ ಪ್ರಕೃತಿ ವಿಕೋಪ ನಿಧಿಯಡಿ ಕಾಮಗಾರಿ ಮಾಡಿಸಿ ಶಾಶ್ವತ ಪರಿಹಾರ ಮಾಡಬೇಕೆಂದು ಸ್ಥಳೀಯರ ಆಗ್ರಹವಾಗಿದೆ.

Previous articleಬಾಡಿಗೆ ಮನೆಯೇ ರಾಯಭಾರ ಕಚೇರಿ, ಪ್ರಧಾನಿ ಜೊತೆ ಫೋಟೋ: ಪೊಲೀಸರಿಗೆ ಶಾಕ್
Next articleಕುಸಿಯಲಿದೆ ಚಿನ್ನ, ಬೆಳ್ಳಿ ಬೆಲೆ… ಗಂಡ-ಹೆಂಡತಿ ಇಬ್ಬರಿಗೂ ಖುಷಿ ಸುದ್ದಿ!

LEAVE A REPLY

Please enter your comment!
Please enter your name here