GST ನೋಟಿಸ್: ರಾಜ್ಯ ಸರ್ಕಾರದ ಕಡೆ ಕೈ ತೋರಿಸಿದ ಕೇಂದ್ರ ಸಚಿವರು

0
104

ಬೆಂಗಳೂರು: “ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿಎಸ್‌ಟಿ ನೋಟಿಸ್‌ಗೂ ಯಾವುದೇ ಸಂಬಂಧವಿಲ್ಲ ಅಂತ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ” ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಜಿಎಸ್‍ಟಿ ನೋಟೀಸ್ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಚಿವರು ಪ್ರತಿಕ್ರಿಯಿಸಿದ್ದು, “ಜಿಎಸ್‌ಟಿಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ #CGST ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ #SGST ಎರಡು ಭಾಗಗಳಿದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

“ಜಿಎಸ್‌ಟಿ‌ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ” ಎಂದು ಸಚಿವರು ವಿವರಣೆ ಕೊಟ್ಟಿದ್ದಾರೆ.

ನಿಜಕ್ಕೂ ದುರಂತ: “ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ‌, ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಬೇರೆ ಯಾವುದೇ ರಾಜ್ಯಗಳಲ್ಲಿ ನೀಡದ ನೋಟಿಸ್, ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದೆ. ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ” ಎಂದು ಜೋಶಿ ಹೇಳಿದ್ದಾರೆ.

ಇನ್ನು ಈ ಕುರಿತಂತೆ ಕರ್ನಾಟಕ ಬಿಜೆಪಿ ಜಿಎಸ್‌ಟಿಯಿಂದ ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸಹಾಯವಾಣಿ ಆರಂಭಿಸಿದೆ. ಜಿಎಸ್‌ಟಿ ವ್ಯಾಪ್ತಿಗೆ ಒಳಪಡದಿರುವ ಬೇಕರಿ, ಕಾಂಡಿಮೆಂಟ್ಸ್ ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯು ನೋಟೀಸ್ ನೀಡುವುದರ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ವತಿಯಿಂದ ಸಣ್ಣ ವ್ಯಾಪಾರಿಗಳ ಹಿತರಕ್ಷಣೆಗಾಗಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು. ಸಮಸ್ಯೆಗಳಿದ್ದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ 8884245123ಕ್ಕೆ ಸಂಪರ್ಕಿಸಿ ಎಂದು ವಿನಂತಿಸಿಕೊಂಡಿತ್ತು.

ರಾಜ್ಯದ ಬೊಕ್ಕಸ ತುಂಬಿಕೊಳ್ಳಲು ಸಣ್ಣ ವ್ಯಾಪಾರಿಗಳ ನೆಮ್ಮದಿ ಕೆಡಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನಾವು ಸದಾ ಹೋರಾಡಲಿದ್ದೇವೆ ಎಂದು ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದೆ.

ಈ ಕುರಿತಂತೆ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಮಂಗಳವಾರ ‘ಜಿಎಸ್ಟಿ ತಿಳಿಯಿರಿ’ ಸಭೆ ನಡೆಸಿದ್ದು ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಸರಕು ಮತ್ತು ಸೇವಾ ತೆರಿಗೆ, (GST) ದಂಡೆ ಮತ್ತು ಬಡ್ಡಿಯನ್ನು ಸಣ್ಣ ವ್ಯಾಪಾರಿಗಳು ಪಾವತಿಸುವುದು ಕಡ್ಡಾಯವಲ್ಲ. ನೋಟಿಸ್‌ಗೆ ನೀವು ನೀಡುವ ಉತ್ತರದ ಆಧಾರದ ಮೇಲೆ ತೆರಿಗೆ ಪ್ರಮಾಣ ಗಣನೀಯ ಕಡಿಮೆಯಾಗಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

Previous articleNimisha Priya: ನರ್ಸ್‌ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ರದ್ದು
Next articleಭಾರತೀಯ ಸೇನೆ ಸೇರಿದ ಅಪಾಚೆ ಹೆಲಿಕಾಪ್ಟರ್‌, ವಿಶೇಷತೆಗಳೇನು?

LEAVE A REPLY

Please enter your comment!
Please enter your name here