ದಾಂಡೇಲಿಯಲ್ಲಿ ಜೆಸಿಬಿ ಘರ್ಜನೆಗೆ ತಯಾರಿ: ವಾಣಿಜ್ಯ ಕಟ್ಟಡಗಳ ಗುರುತು

0
122

ಉತ್ತರ ಕನ್ನಡ: ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರದ ಸ್ಪಷ್ಟ ನಿರ್ದೇಶನದ ಹಿನ್ನೆಲೆಯಲ್ಲಿ ದಾಂಡೇಲಿ ನಗರಸಭೆ ವ್ಯಾಪಾರದ ಹೆಸರಲ್ಲಿ ಅಕ್ರಮವಾಗಿ ಅತಿಕ್ರಮಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ನಿವೇಶನಗಳನ್ನು ತೆರವುಗೊಳಿಸಲು ಶನಿವಾರದಿಂದ ಕಾರ್ಯಾಚರಣೆ ಆರಂಭಿಸಿದೆ.

ಜೆ.ಎನ್.ರಸ್ತೆಯ ಪೂರ್ವ ಭಾಗದಲ್ಲಿ ಬಡವರಿಗೆ ಹಾಗೂ ವ್ಯಾಪಾರಸ್ಥರಿಗೆ 15×20 ಅಡಿ ಪ್ರಮಾಣದ ನಿವೇಶನಗಳನ್ನು ನಗರಸಭೆ ಅಧಿಕೃತವಾಗಿ ನೀಡಿದ್ದರೂ, ಕೆಲವು ನಿವೇಶನದಾರರು ಆ ಗಡಿಗಳನ್ನು ಮೀರಿ 10 ರಿಂದ 20 ಪಟ್ಟುವರೆಗೂ ಹೆಚ್ಚಾಗಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೆಲವರು ಈ ಅತಿಕ್ರಮಿತ ಜಾಗದ ಮೇಲೆ ಆಶ್ರಯ ಯೋಜನೆಯಲ್ಲಿಯೇ ಪಟ್ಟಿ ಪಡೆದು ಕಟ್ಟಡ ನಿರ್ಮಿಸಿದ್ದಾರೆ ಎಂಬ ದೂರಿದೆ.

ಅತಿಕ್ರಮಣದ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಕೆಲವು ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರದಿಂದ ದರ ನಿಗದಿ ಮಾಡಿ ಜಾಗ ನೀಡುವಂತೆ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಈ ಮನವಿಗೆ ಒಪ್ಪದಂತೆ ಆದೇಶಿಸಿದೆ. ಸರ್ಕಾರ ಈ ಜಾಗವನ್ನು ತೆರವುಗೊಳಿಸಿ ಮಾರ್ಗಸೂಚಿಯನ್ವಯ ಬಹಿರಂಗ ಹರಾಜಿಗೆ ಹಾಕುವಂತೆ ನಗರಸಭೆಗೆ ಸೂಚಿಸಿದೆ.

ಮಾರ್ಕಿಂಗ್ ಕಾರ್ಯ ಆರಂಭ: 4-5 ಬಾರಿ ನೋಟಿಸ್ ನೀಡಿದರೂ ಕೆಲ ಅತಿಕ್ರಮಣದಾರರು ರಾಜಕೀಯ ಪ್ರಭಾವ ಬಳಸಿ ಒತ್ತಡ ತರಲು ಯತ್ನಿಸಿದ್ದು, ತೀವ್ರ ಒತ್ತಡದ ನಡುವೆಯೂ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ ಅಧಿಕಾರಿಗಳೇ ಶಿಕ್ಷೆಗೆ ಒಳಗಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದರಿಂದಾಗಿ ನಗರಸಭೆ ಈಗ ಕಠಿಣ ಕ್ರಮ ಕೈಗೊಂಡಿದ್ದು, ಮೊದಲ ಹಂತವಾಗಿ ಜೆ.ಎನ್.ರಸ್ತೆಯ ಅಂಗಡಿಗಳ ಅತಿಕ್ರಮಿತ ಭಾಗವನ್ನು ಗುರುತಿಸಲು ಮಾರ್ಕಿಂಗ್ ಕಾರ್ಯ ಆರಂಭಿಸಿದೆ. ಅಧಿಕಾರಿಗಳ ಪ್ರಕಾರ, ಈಗಾಗಲೇ ಒಂದು ಪ್ರಕರಣದಲ್ಲಿ ಹೈಕೋರ್ಟ್ ತನ್ನ ಆದೇಶವನ್ನು ಪಾಲಿಸದ ಕಾರಣದಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ, ಈ ಬಾರಿ ಯಾವುದೇ ವಿಳಂಬವಿಲ್ಲದೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದಾರೆ.

ಅತಿಕ್ರಮಿತ ಜಾಗಗಳನ್ನು ಸ್ವಯಂ ತೆರವುಗೊಳಿಸಲು ಕೊನೆಯ ಗಡುವು ನೀಡಲಾಗಿದ್ದು, ಅವಧಿ ನಂತರವೂ ತೆರವುಗೊಳಿಸದಿದ್ದರೆ ನಗರಸಭೆಯೇ ಕಾರ್ಯಾಚರಣೆ ನಡೆಸಿ, ಅದರ ವೆಚ್ಚವನ್ನು ಅತಿಕ್ರಮಣದಾರರಿಂದ ವಸೂಲಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Previous articleವಿಐಪಿಗಳ ಸಂಚಾರದ ವೇಳೆ ಇನ್ನು ಸೈರನ್ ಕೂಗಲ್ಲ!
Next articleGovernment Employee: ಕರ್ನಾಟಕದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

LEAVE A REPLY

Please enter your comment!
Please enter your name here