5 ರಾಷ್ಟ್ರಗಳ ಪ್ರವಾಸ ಮುಗಿಸಿ ಮರಳಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 5 ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೆಹಲಿಗೆ ವಾಪಸ್ ಆದರು. ಮೋದಿ ಘಾನಾ, ಟ್ರಿನಿಡಾಡ್, ಟೊಬಾಗೊ, ಅರ್ಜೆಂಟೈನಾ, ಬ್ರೆಜಿಲ್ ಹಾಗೂ ನಮೀಬಿಯಾ ದೇಶಗಳಿಗೆ ಭೇಟಿ ನೀಡಿದ್ದರು. ಹಲವು ಕಾರ್ಯಕ್ರಮ, ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಈ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಾನಾದ ಅತ್ಯುನ್ನತ ನಾಗರಿಕ ಗೌರವ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಗಿತ್ತು.

ಟೊಬೆಗೊ ಅಧ್ಯಕ್ಷೆ ಕ್ರಿಸ್ಟೀನ್ ಕಂಗಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬೆಗೊ ಅನ್ನು ಪ್ರದಾನ ಮಾಡಿದರು.

ಬಳಿಕ ನಮೀಬಿಯಾಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕೂಡ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ನೀಡಿ ಗೌರವಿಸಲಾಯಿತು.

ವಿದೇಶಿ ಸಂಸತ್‌ಗಳಲ್ಲಿ 17 ಬಾರಿ ಭಾಷಣ : ಪ್ರಧಾನಿ ನರೇಂದ್ರ ಮೋದಿ ನಮೀಬಿಯಾ ಸಂಸತ್​ ಉದ್ದೇಶಿಸಿ ಮಾತನಾಡುವ ಮೂಲಕ ವಿದೇಶಗಳ ಸಂಸತ್ತಿನಲ್ಲಿ ಹೆಚ್ಚು ಬಾರಿ ಭಾಷಣ ಮಾಡಿದ ದಾಖಲೆ ಬರೆದರು.

ಮೋದಿ 17 ಸಂಸತ್‌ಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ಮುನ್ನ ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ಎಲ್ಲಾ ಪ್ರಧಾನಿಗಳು ಮಾಡಿದ ಭಾಷಣಗಳಿಗೆ ಇದು ಸಮವಾಗಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪ್ರಧಾನಿಯಾಗಿದ್ದ ದಿ. ಮನಮೋಹನ್ ಸಿಂಗ್ 7 ಬಾರಿ ವಿದೇಶಿ ಸಂಸತ್​​ ಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ಇನ್ನು ಉಕ್ಕಿನ ಮಹಿಳೆ ಎಂದೇ ಜನಜನಿತರಾಗಿದ್ದ ಇಂದಿರಾಗಾಂಧಿ 4 ಸಲ, ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು 3 ಬಾರಿ ವಿದೇಶಿ ಸಂಸತ್​​​​ ಉದ್ದೇಶಿಸಿ ಮಾತನಾಡದ್ದರು. ರಾಜೀವ್​ ಗಾಂಧಿ ಎರಡು ಬಾರಿ ಹಾಗೂ ನರಸಿಂಹ ರಾವ್ ಒಮ್ಮೆ ಸೇರಿ ಒಟ್ಟು 17 ಭಾಷಣಗಳನ್ನು ಪ್ರಧಾನಿಗಳು ಮಾಡಿದ್ದಾರೆ.

27 ಅಂತರರಾಷ್ಟ್ರೀಯ ಗೌರವ: ಬ್ರೆಜಿಲ್, ನಮೀಬಿಯಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊಗಳು ಪ್ರಧಾನಿ ಮೋದಿಯವರಿಗೆ ತಮ್ಮ ಅತ್ಯುನ್ನತ ನಾಗರಿಕ ಗೌರವಗಳಾದ ‘ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್’, ‘ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್’ ಮತ್ತು ‘ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬಾಗೊ’ ಗಳನ್ನು ನೀಡಿ ಗೌರವಿಸಿವೆ. ನರೇಂದ್ರ ಮೋದಿ ಮೇ 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ವಿದೇಶಿ ಸರ್ಕಾರದಿಂದ 27 ಅಂತರರಾಷ್ಟ್ರೀಯ ಗೌರವಗಳನ್ನು ಪಡೆದಿದ್ದಾರೆ.