ಶೀಘ್ರದಲ್ಲೇ ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕ್ ರೈಲು ಸಂಚಾರ

ಚಾಮರಾಜನಗರ: ಮೈಸೂರು-ಚಾಮರಾಜನಗರ ನಡುವಿನ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ಶೀಘ್ರವೇ ಉಭಯ ನಗರದ ನಡುವೆ ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ. ಬಾಕಿ ಉಳಿದಿದ್ದ ವಿದ್ಯುದೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ಒಪ್ಪಿಗೆ ಸಿಕ್ಕಿದೆ.

1.25 ಕಿ. ಮೀ. ಉದ್ದದ ವಿದ್ಯುದೀಕರಣ ಕಾಮಗಾರಿ ಬಾಕಿ ಉಳಿದ ಹಿನ್ನಲೆಯಲ್ಲಿ ಮೈಸೂರು-ಚಾಮರಾಜನಗರ ನಡುವೆ ಎಲೆಕ್ಟ್ರಿಕ್ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆದರೆ ಈಗ ಈ ಬಾಕಿ ಉಳಿದ ಕಾಮಗಾರಿ ಆರಂಭವಾಗಲಿದೆ.

ವಿಮಾನಯಾನ ಸಚಿವಾಲಯ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಬಳಿಯಲ್ಲಿ ರೈಲು ಮಾರ್ಗದ ವಿದ್ಯುದೀಕರಣಕ್ಕೆ ಒಪ್ಪಿಗೆಯನ್ನು ನೀಡಿದೆ. ಈ ಕುರಿತು ರೈಲ್ವೆ ಇಲಾಖೆ ಮತ್ತು ವಿಮಾನಯಾನ ಸಚಿವಾಲಯದ ಜೊತೆ ನಡೆದ ಮಾತುಕತೆ ಯಶಸ್ವಿಯಾಗಿದೆ.

ಅಧಿಕೃತವಾಗಿ ಎನ್‌ಒಸಿ ಸಿಕ್ಕಿದ ಬಳಿಕ ಕಾಮಗಾರಿ ಆರಂಭವಾಗಲಿದೆ. ಮೈಸೂರು-ಚಾಮರಾಜನಗರ ನಡುವಿನ 61 ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡು ಸುಮಾರು 2 ವರ್ಷ ಕಳೆದಿದೆ. ಆದರೆ ಮೈಸೂರು ವಿಮಾನ ನಿಲ್ದಾಣದ ಸಮೀಪದ ಕಾಮಗಾರಿ ಬಾಕಿ ಇದೆ.

ವಿಮಾನ ನಿಲ್ದಾಣದ ಸಮೀಪ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಮಾಡಿದರೆ ವಿಮಾನ ಸಂಚಾರದ ಸಿಗ್ನಲ್‌ಗೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ವಿಮಾನಯಾನ ಸಚಿವಾಲಯ ಕಾಮಗಾರಿಗೆ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ 61 ಕಿ. ಮೀ. ವಿದ್ಯುದೀರಕರಣ ಕಾಮಗಾರಿ ಪೂರ್ಣಗೊಂಡರೂ ಸಹ ಮೈಸೂರು-ಚಾಮರಾಜಗರ ನಡುವೆ ಡೀಸೆಲ್ ಎಂಜಿನ್ ರೈಲುಗಳು ಮಾತ್ರ ಸಂಚಾರವನ್ನು ನಡೆಸುತ್ತಿದ್ದವು.

ಮೈಸೂರು ವಿಮಾನ ನಿಲ್ದಾಣದ ಸಮೀಪ 1.25 ಕಿ. ಮೀ. ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡರೆ ಉಭಯ ನಗರಗಳ ನಡುವೆ ವಿದ್ಯುತ್ ಚಾಲಿತ ರೈಲುಗಳು ಸಂಚಾರವನ್ನು ನಡೆಸಲಿವೆ. ಆದರೆ ಈಗ ಈ ಕಾಮಗಾರಿಗೆ ಒಪ್ಪಿಗೆಯನ್ನು ನೀಡಲಾಗಿದೆ.

ಮೈಸೂರು ಕೇಂದ್ರ ರೈಲು ನಿಲ್ದಾಣಕ್ಕೆ ಹಲವು ಎಲೆಕ್ಟ್ರಿಕ್ ರೈಲುಗಳು ಬರುತ್ತವೆ. ಆದರೆ ಅವುಗಳನ್ನು ಚಾಮರಾಜನಗರ ತನಕ ವಿಸ್ತರಣೆ ಮಾಡಲು ವಿದ್ಯುದೀಕರಣ ಕಾಮಗಾರಿ ಅಡ್ಡಿಯಾಗಿತ್ತು. ಈಗ ಕಾಮಗಾರಿ ನಡೆಯಲಿದ್ದು, ಉಭಯ ನಗರದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರತಿದಿನ ಮೈಸೂರು-ಚಾಮರಾಜನಗರ ನಡುವೆ ನೂರಾರು ಜನರು ಸಂಚಾರವನ್ನು ನಡೆಸುತ್ತಾರೆ. ಎಲೆಕ್ಟ್ರಿಕ್ ರೈಲುಗಳ ಸಂಚಾರ ಆರಂಭವಾದರೆ ಇನ್ನಷ್ಟು ರೈಲುಗಳು ಉಭಯ ನಗರದ ನಡುವೆ ಸಂಚಾರ ನಡೆಸಲಿದ್ದು, ಪ್ರಯಾಣಿರಿಗೆ ಸಹಕಾರಿಯಾಗಲಿದೆ.

ಮೈಸೂರು ವಿಮಾನ ನಿಲ್ದಾಣದ ನಗರದ ಹೊರವಲಯದ ಮಂಡಕಳ್ಳಿಯಲ್ಲಿದೆ. ಮೈಸೂರು-ನಂಜನಗೂಡು ಮಾರ್ಗದಲ್ಲಿ ಇರುವ ವಿಮಾನ ನಿಲ್ದಾಣದ ಸಮೀಪವೇ ಮೈಸೂರು-ಚಾಮರಾನಗರ ರೈಲು ಮಾರ್ಗವಿದೆ. ಆದ್ದರಿಂದ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಗೆ ಅಡಚಣೆ ಉಂಟಾಗಿತ್ತು.

2021ರಲ್ಲಿ ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣ ಯೋಜನೆಯ ಕಾಮಗಾರಿ ಆರಂಭವಾಯಿತು. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಂಡರೂ ಸಹ ವಿಮಾನ ನಿಲ್ದಾಣದ ಸಮೀಪದ ಮಾರ್ಗದ ಕಾಮಗಾರಿ ಬಾಕಿ ಉಳಿದಿತ್ತು.

ಈಗ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡರೆ ಉಭಯ ನಗರದ ನಡುವಿನ ರೈಲುಗಳ ವೇಗ ಹೆಚ್ಚಾಗಲಿದೆ. ಅಲ್ಲದೇ ರೈಲಿಗೆ ಹೆಚ್ಚಿನ ಬೋಗಿಗಳನ್ನು ಸಹ ಅಳವಡಿಕೆ ಮಾಡಬಹುದಾಗಿದೆ. ಕಾಮಗಾರಿಯನ್ನು ಯಾವಾಗ ಆರಂಭಿಸಲಾಗುತ್ತದೆ? ಎಂಬುದು ಇನ್ನೂ ಸಹ ಖಚಿತವಾಗಿಲ್ಲ.