ಧರ್ಮಾಧಾರಿತ ಮೀಸಲಾತಿ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು

ಬೆಂಗಳೂರು: ಸಂವಿಧಾನ ಪಾಲಿಸುವ ಬಗ್ಗೆ ಮಾತನಾಡುವ ಕಾಂಗ್ರೆಸ್‌ ಸರ್ಕಾರ, ಧರ್ಮಾಧಾರಿತ ಮೀಸಲಾತಿಯನ್ನು ನೀಡುವುದನ್ನು ಹೆಚ್ಚಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕೆ ಮಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಧರ್ಮದ ಮೇಲೆ ನೀಡುವ ಮೀಸಲಾತಿಯನ್ನು ಭಾರತದ ಸಂವಿಧಾನ ನಿಷೇಧಿಸುತ್ತದೆ. ಚುನಾವಣಾ ಲಾಭಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೀಸಲಾತಿಯನ್ನು ನೀಡುವ ಮೂಲಕ ತುಷ್ಠಿಕರಣ ರಾಜಕಾರಣ ಮಾಡುತ್ತಿದೆ. ಮತಬ್ಯಾಂಕ್ ರಾಜಕೀಯಕ್ಕೆ ಆದ್ಯತೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಒಳಿತನ್ನು ಮರೆತಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ಹೊಡೆಯುತ್ತಿದೆ. ಅಭಿವೃದ್ಧಿಯನ್ನು ಮರೆತ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ ಶಾಂತಿ ಮತ್ತು ಏಕತೆಯನ್ನು ಹಾಳುಮಾಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಧರ್ಮದ ಆಧಾರದ ಮೇಲೆ ಶೇ.15% ಮೀಸಲಾತಿ ನೀಡಲು ಕರ್ನಾಟಕ ಸರ್ಕಾರವು ಇಂದು ಕ್ಯಾಬಿನೆಟ್ ನಲ್ಲಿ ತಗೆದುಕೊಂಡ ನಿರ್ಧಾರ ಸಂವಿಧಾನದ ಸ್ಪಷ್ಟ ಉಲ್ಲಂಘನೆ.
ಈ ಹಿಂದೆ, ರಾಹುಲ್ ಗಾಂಧಿಯವರ ಸೂಚನೆಯ ಮೇರೆಗೆ ಸಿದ್ದರಾಮಯ್ಯ ಸರ್ಕಾರ ಶೇ. 4% ರಷ್ಟು ಮೀಸಲಾತಿಯನ್ನು ಒಂದು ಸಮುದಾಯಕ್ಕೆ ನೀಡಿತ್ತು ಮತ್ತು ಈಗ ವಸತಿ ಯೋಜನೆಗಳಲ್ಲಿ ಶೇ.15% ಮೀಸಲಾತಿ ನೀಡಲು ತೀರ್ಮಾನಿಸಿದೆ. ಇದು SC, ST, OBC ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿ ಹಾಗೂ ಅವರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸೇನೆಯಲ್ಲಿ ಮುಸ್ಲಿಮರಿಗೆ ಧರ್ಮ ಆಧಾರಿತ ಮೀಸಲಾತಿಯನ್ನು ಪರಿಚಯಿಸಲು ಸಹ ಪ್ರಯತ್ನಿಸುತ್ತಿರುವುದು ನಿಜಕ್ಕೂ ಶೋಚನೀಯ. ಹಲವಾರು ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್ ಇಂತಹ ಅಸಂವಿಧಾನಿಕ ನಿರ್ಧಾರಗಳನ್ನು ರದ್ದುಗೊಳಿಸಿದೆ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಈ ನೀತಿ‌, ನಿಯಮಗಳನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ.