ಸಂ.ಕ ಸಮಾಚಾರ, ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಒಡೆದ ಮನೆಯಾಗುತ್ತಿದೆ.
ಕೆಲ ತಿಂಗಳುಗಳಿಂದ ಪಕ್ಷದ ಸಹವರ್ತಿ ಶಾಸಕರ ವಿರುದ್ಧ ಮುನಿಸಿಕೊಂಡಿರುವ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಶುಕ್ರವಾರ ಬಹಿರಂಗ ಸಭೆಯೊಂದರಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಇತರ ಶಾಸಕರು ಹಾಗೂ ಮುಖಂಡರ ವಿರುದ್ಧ ‘ಪಟಾಲಂ’ ಎಂಬ ಪದ ಬಳಸಿ ಟೀಕಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಐನೋರಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ವೇಳೆ ಶಾಸಕರು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಹಾಗೂ ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ದಲಿತರು ಪ್ರವೇಶ ಮಾಡದಂತೆ ರಮೇಶ್ ಕುಮಾರ್ ಮತ್ತು ಅವರ ಪಟಾಲಂ ವ್ಯವಸ್ಥಿತ ಷಡ್ಯಂತ್ರ ನಡೆಸಿದೆ ಎಂದು ಟೀಕಿಸಿದರು.
ಹಣಬಲ ಮತ್ತು ತೋಳ್ಬಲವನ್ನು ಮುಂದಿಟ್ಟುಕೊಂಡು ಈ ಪಟಾಲಂ ನಡೆಸುತ್ತಿರುವ ಆಟ ಬಹಳ ಕಾಲ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್ ಚುನಾವಣೆಗಳಲ್ಲಿ ದಲಿತರಿಗೆ ಅವಕಾಶ ಸಿಗದಂತೆ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಶಾಸಕರಾದ ಮಾಲೂರಿನ ಕೆ ವೈ ನಂಜೇಗೌಡ ಮತ್ತು ಕೋಲಾರದ ಕೊತ್ತೂರು ಮಂಜುನಾಥ್ ಅವರ ಪಟಾಲಂ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ. ಈ ಪಟಾಲಂಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ಸೂತ್ರಧಾರರಾಗಿದ್ದಾರೆ ಎಂದು ಶಾಸಕ ಎಸ್.ಎನ್ ಜರೆದರು.
ಗುರುವಾರ ತಾನೇ ಶಾಸಕ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ನಜೀರ್ ಅಹ್ಮದ್ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ಮತ್ತು ಶಾಸಕರಾದ ಕೊತ್ತೂರು ಮಂಜುನಾಥ ಹಾಗೂ ನಂಜೇಗೌಡ ವಿರುದ್ಧ ಹರಿಹಾಯ್ದಿದ್ದರು.
ಶುಕ್ರವಾರ ಆ ಪಟ್ಟಿಗೆ ರಮೇಶ್ ಕುಮಾರ್ ರನ್ನು ಸಹ ಸೇರಿಸಿದ್ದಾರೆ.
ಕೋಮುಲ್ ಚುನಾವಣೆಗೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಎಸ್.ಎನ್.ನಾರಾಯಣಸ್ವಾಮಿ ಕಳೆದ ಮೂರು ತಿಂಗಳಿನಿಂದ ಮುನಿಸಿಕೊಂಡಿದ್ದಾರೆ.
ಇದೀಗ ನಡೆಯುತ್ತಿರುವ ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಮ್ಮನ್ನು ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಅವರ ಆರೋಪ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಎಸ್ಎನ್ ಬಹಿರಂಗ ಸಭೆಯಲ್ಲಿ ಮಾಡಿರುವ ಟೀಕಾ ಪ್ರಹಾರದಿಂದ ಕೋಲಾರ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತವು ಬೀದಿಗೆ ಬಿದ್ದಂತಾಗಿದೆ