ಬೆಂಗಳೂರು: ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು. ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಹೃದಯ ದೀಪ’ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.