14 ಸಾವಿರ ರೂ. ಖೋಟಾ ನೋಟು ನೀಡಿ ವಂಚನೆ

ಚಿಕ್ಕಮಗಳೂರು: ಮಹಿಳೆಯೊಬ್ಬರಿಂದ ಕುರಿ ಖರೀದಿ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಗೆ 14 ಸಾವಿರ ರೂ. ಖೋಟಾ ನೋಟು ನೀಡಿ, ವಂಚಿಸಿರುವ ಘಟನೆ ಕಡೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಡಘಟ್ಟ ಗ್ರಾಮದ ಹೇಮಾವತಿ ಎಂಬುವರ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕುರಿ ಖರೀದಿ ಮಾಡಿದ್ದ. ಕುರಿ ಖರೀದಿಗೆ ಸಂಬಂಧಿಸಿದಂತೆ ೫೦೦ ರೂಪಾಯಿಯ ೨೮ ನೋಟುಗಳನ್ನು ಮಹಿಳೆಗೆ ನೀಡಿದ್ದ. ಅಪರಿಚಿತದಿಂದ ಕುರಿ ಮಾರಿದ ಹಣ ಪಡೆದ ಮಹಿಳೆ ಆ ಹಣವನ್ನು ಸಖರಾಯಪಟ್ಟಣದ ಎಸ್‌ಬಿಐ ಬ್ಯಾಂಕ್‌ನ ಅಕೌಂಟ್‌ಗೆ ಹಾಕಲು ಬಂದಿದ್ದಾಗ ಎಲ್ಲಾ ನೋಟುಗಳು ಖೋಟಾ ಎಂಬುದು ಬೆಳಕಿಗೆ ಬಂದಿದೆ. ಕೂಡಲೇ ಬ್ಯಾಂಕ್ ಮ್ಯಾನೇಜರ್ ಸಖರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಹೇಮಾವತಿ ಅವರನ್ನು ವಿಚಾರಣೆ ನಡೆಸಿದಾಗ ಕುರಿ ಮಾರಾಟ ಮಾಡಿದ ಹಣ ಎಂದು ಮಾಹಿತಿ ನೀಡಿದ್ದಾರೆ. ಹೇಮಾವತಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಕುರಿ ಖರೀದಿ ಮಾಡಿದ ವಂಚಕರ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.