ಬ್ರಾಹ್ಮಣ ಮಹಾಸಭೆ ಚುನಾವಣೆಗೆ ಭಾರೀ ಪೈಪೋಟಿ

0
18

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಾ. ಭಾನುಪ್ರಕಾಶ್ ಶರ್ಮ ಅವರನ್ನು ಗೆಲ್ಲಿಸಬೇಕು ಎಂದು ಮಹಾಸಭಾದ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪ್ರಸಮುದಾಯಕ್ಕೆ ರಾಜಕೀಯ ಶಕ್ತಿ ಇಲ್ಲ. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಯಾದರೂ, ಅದು ಎಲ್ಲರ ಬಳಕೆಗೆ ಬರುವುದಿಲ್ಲ. ಸೂಕ್ತವ್ಯಕ್ತಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾನುಪ್ರಕಾಶ್ ಅವರನ್ನು ನಿಲ್ಲಿಸಲಾಗಿದೆ. ಅವರು ಕನ್ನಡ ನಾಡಿಗಷ್ಟೇ ಸೀಮಿತವಲ್ಲ. ಅಮೆರಿಕ ಸಹಿತ ಐದಾರು ದೇಶಗಳಲ್ಲಿ ಅವರು ಬ್ರಾಹ್ಮಣ ಸಮಾಜವನ್ನು ಹುಟ್ಟುಹಾಕಿದ್ದಾರೆ. ಈ ಮೂಲಕ ತಾವೊಬ್ಬ ಸಮರ್ಥ ಆಡಳಿತಗಾರ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಮಹಾಸಭೆಯಲ್ಲಿ ಕಳೆದ ೩೦ ವರ್ಷಗಳಿಂದ ಸದಸ್ಯನಾಗಿ ವಿವಿಧ ಹಂತಗಳ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಭಾನುಪ್ರಕಾಶ್ ಶರ್ಮಾ ಏಳು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ರಾಜ್ಯದಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿ ಸಂಘಟಕರೆಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ೧೪ ಶಾಲೆಗಳ ಆಡಳಿತ ಮಂಡಳಿಯಲ್ಲಿ ಜವಾಬ್ದಾರಿ ನಿರ್ವಹಿಸಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ವಿಶೇಷವಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಈಗಾಗಲೇ ೧೧ ಜಿಲ್ಲೆಗಳಲ್ಲಿ ಅಶೋಕ್ ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ್ ಶರ್ಮ ತಂಡದ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.
ಅಧ್ಯಕ್ಷೀಯ ಅಭ್ಯರ್ಥಿ ಡಾ. ಭಾನುಪ್ರಕಾಶ್ ಶರ್ಮ ಮಾತನಾಡಿ ರಾಜ್ಯಾದ್ಯಂತ ಸುಮಾರು ೬೪ ಸಾವಿರಕ್ಕೂ ಅಧಿಕ ಮತದಾರರು ಇದ್ದು, ಈ ಪೈಕಿ ೩೪,೦೦೦ ಸಾವಿರಕ್ಕೂ ಅಧಿಕ ಮಂದಿ ಬೆಂಗಳೂರು ನಗರದಲ್ಲಿದ್ದಾರೆ. ಈ ಚುನಾವಣೆ ಸಂಘಟನೆ ಬಲವರ್ಧನೆ ಹಿನ್ನಲೆಯಲ್ಲಿ ಮಹತ್ವದ್ದಾಗಿದ್ದು, ಪ್ರತಿ ಸದಸ್ಯರೂ ತಪ್ಪದೆ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಿಂದಿನ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಮತದಾನ ಎಲ್ಲಿ?
ಏ. ೧೩ರಂದು ಬೆಂಗಳೂರು ದಕ್ಷಿಣದ ಎನ್.ಆರ್. ಕಾಲೋನಿಯ ಎಪಿಎಸ್ ಕಾಲೇಜಿನಲ್ಲಿ, ಉತ್ತರದ ಮತದಾರರು ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪ, ಶಂಕರಪುರಂ, ಕೇಂದ್ರ, ಗ್ರಾಮಾಂತರ ಹಾಗೂ ರಾಮನಗರದ ಮತದಾರರು ಶ್ರೀರಾಯ ಕಲ್ಯಾಣ ಮಂಟಪ ಪಂಪಮಹಾಕವಿ ರಸ್ತೆ ಇಲ್ಲಿ ತಮ್ಮ ಮತ ಚಲಾಯಿಸಬಹುದು. ಕೋಲಾರದ ಮತದಾನ ಶ್ರೀ ಗಾಯತ್ರಿ ಪ್ರಾರ್ಥನಾ ಮಂದಿರ, ಪಿಸಿ ಬಡಾವಣೆಯಲ್ಲಿ ನಡೆಯಲಿದೆ.
ಬೆಂಗಳೂರಿನ ಜೊತೆಗೆ, ಮೈಸೂರು, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ. ವಿಜಯಪುರ, ಬೆಳಗಾವಿ, ಗದಗ, ಶಿರಸಿ, ಕೊಪ್ಪಳ, ರಾಯಚೂರು, ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಹಾಸನ, ಕುಂದಾಪುರ, ಮಂಗಳೂರು ಚಿಕ್ಕಮಗಳೂರು, ಕೊಪ್ಪ, ತುಮಕೂರು ಹೀಗೆ ರಾಜ್ಯದ ಹಲವೆಡೆ ಏಕ ಕಾಲದಲ್ಲಿ ಮತದಾನ ನಡೆಯಲಿದೆ.

Previous articleಯೂಟ್ಯೂಬರ್ ಸಮೀರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ
Next articleವಿವಿ ಪ್ರಾಧ್ಯಾಪಕರ ವೃತ್ತಿ ಸಾರ್ವಜನಿಕ ಹುದ್ದೆ ಅಲ್ಲ