ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ಇತ್ತಿಚೆಗೆ ಏಳು ಮನೆಗಳ್ಳತನ ನಡೆದು ಜನರಲ್ಲಿ ಭೀತಿ ಮೂಡಿಸಿದ್ದ ಪ್ರಕರಣವನ್ನು ಶಹರ,ಬೆಟಗೇರಿ ಬಡಾವಣೆ ಪೊಲೀಸರು ಬೇಧಿಸಿ ನಾಲ್ಕು ಅಂತರಾಜ್ಯ ಕಳ್ಳರನ್ನು ಹೈದ್ರಾಬಾದನಲ್ಲಿ ಬಂಧಿಸಿ ಲಕ್ಷಾಂತರ ರೂಪಾಯಿಗಳ ಚಿನ್ನದಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ತಮಿಳುನಾಡಿನ ತಿರುವಾವೂರು ಜಿಲ್ಲೆಯ ನಾಗಫಟೀನಾ ತಾಲೂಕಿನ ವೆಂಕಟೇಶನ್ ರಂಗನಾಥನ್ ವಡಬಾದಿ ,ಚೆನ್ನೈನ ಸೂರ್ಯಶೆಟ್ಟಿ ವಿಜಯಕುಮಾರ ಎಂದು ಗುರುತಿಸಲಾಗಿದೆ. ಬಂಧಿತರಿಂದ 8ಲಕ್ಷ ರೂಪಾಯಿ ಮೌಲ್ಯದ 130 ಗ್ರಾಮ ಚಿನ್ನದಾಭರಣಗಳು,1.50 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣ, ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ಕೀಲಿ ಮುರಿದು ಮನೆಗಳ್ಳತನ ಮಾಡಿ ರೈಲು,ಬಸ್ ಮೂಲಕ ಪರಾರಿಯಾಗುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿನ್ನದಾಭರಣಗಳನ್ನು ತೊಳೆದು ಹೊಳಪು ಮಾಡಿಕೊಡುವದಾಗಿ ವಂಚಿಸಿ ಪರಾರಿಯಾಗಿದ್ದ ಇಬ್ಬರು ಅಂತರಾಜ್ಯ ಕಳ್ಳರನ್ನು ಬಡಾವಣೆ ಪೊಲೀಸರು ಬಂಧಿಸಿ 3.75 ಲಕ್ಷ ರೂಪಾಯಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಕಳ್ಳರನ್ನು ಬಿಹಾರದ ಗೋವಿಂದಪೂರ ಗ್ರಾಮದ ಬಟ್ಟೆ ವರ್ತಕ ದೀಪಕ ಅಶೋಕ ಗುಪ್ತಾ, ಭಾಗಲಪುರ ಜಿಲ್ಲೆಯ ಬಿಪಿನಕುಮಾರ ನಂದಕುಮಾರ ಶಾಹಾ ಎಂದು ಗುರುತಿಸಲಾಗಿದ್ದು,ಈ ಇಬ್ಬರೂ ವ್ಯಕ್ತಿಗಳು ಹಿಂದೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಈ ಇಬ್ಬರೂ ವ್ಯಕ್ತಿಗಳ ಜಾಮೀನು ರದ್ದುಪಡಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ.