ಬೀದರ್: ಜಿಲ್ಲೆಯ ವಿವಿಧೆಡೆ ಶುಕ್ರವಾರ ತುಂತುರು ಮಳೆ ಸುರಿಯಿತು. ಬೀದರ್‌ನಲ್ಲಿ ಸಂಜೆ ಮೋಡ ಮುಸುಕಿದ ವಾತಾವರಣ, ಆಗಾಗ್ಗೆ ಗುಡುಗಿನ ಶಬ್ದ ಕೇಳಿ ಬಂದಿತು. ತಾಲ್ಲೂಕಿನ ಮನ್ಹಳ್ಳಿ ಹೋಬಳಿ ಸುತ್ತಮುತ್ತ ಸುಮಾರು ಒಂದು ಗಂಟೆ ತುಂತುರು ಮಳೆ ಸುರಿಯಿತು. ಚಿಟಗುಪ್ಪ ತಾಲ್ಲೂಕಿನ ಬೋರಾಳ್ ಗ್ರಾಮದಲ್ಲಿ ಸಂಜೆ ಗುಡುಗು ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿಯಿತು.
ಹಸು ಸಾವು
ಬಸವಕಲ್ಯಾಣ ತಾಲ್ಲೂಕಿನಲ್ಲಿ ಗುಡುಗು, ಮಿಂಚು ಸಹಿತ ಸುರಿದ ಮಳೆ ಸಂದರ್ಭದಲ್ಲಿ ಸಿಡಿಲು ಎರಗಿ ಉಮ್ಮಾಪೂರ್ ಗ್ರಾಮದಲ್ಲಿ ರೈತ ರಮೇಶ್ ಭೀಮಾಶಂಕರ್ ಅವರಿಗೆ ಸೇರಿದ ಹಸು ತೀವ್ರ ಸುಟ್ಟಗಾಯಗಳಿಂದಾಗಿ ಸಾವಿಗೀಡಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಬಿಡುಗಡೆಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಮಾವು ಬೆಳೆಗೆ ಕಂಟಕ
ತುಂತುರು ಮಳೆಯಿಂದ ಮಿಡಿ ಮಾವಿನ ಕಾಯಿಗಳಿಗೆ ಕಂಟಕವಾಗಿದೆ. ಜಿಲ್ಲೆಯಲ್ಲಿ ದಿನದ ಉಷ್ಣಾಂಶ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿರುವುದೇ ಮಳೆಯಾಗಿರುವುದಕ್ಕೆ ಕಾರಣ ಎಂದು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತಲಿದೆ.