ಬಾಗಲಕೋಟೆ(ಕುಳಗೇರಿ ಕ್ರಾಸ್): ಬೀರನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬಿಸಿ ಊಟಕ್ಕೆ ಬಳಸುತ್ತಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಶಾಲಾ ಅವಧಿಯಲ್ಲಿಯೇ ಈ ದುರ್ಘಟನೆ ಸಂಭವಿಸಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ.
ಬೀರನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಅಡುಗೆ ಸಿಬ್ಬಂದಿ ಬಿಸಿಯೂಟದ ಕೊಠಡಿಯಲ್ಲಿ ಗ್ಯಾಸ್ ಮೇಲೆ ಅಡುಗೆ ತಯಾರಿಸುತ್ತಿದ್ದ ಸಂದರ್ಭದಲ್ಲಿಯೇ ಅನಿಲ ಸೋರಿಕೆ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಅಡುಗೆ ಕೊಠಡಿಯಲ್ಲಿದ್ದ ನೀರು ತುಂಬಿದ ಬ್ಯಾರಲ್, ಕೊಡ ಹಾಗೂ ಅಡುಗೆ ಬಳಕೆಯ ಪರಿಕರಗಳು ಬೆರೆಡೆ ಸಿಡಿದು ಸುಟ್ಟು ನಾಶವಾಗಿದ್ದು ಅದೃಷ್ಟವಶಾತ್ ಯಾವುದೇ ರೀತಿಯ ಜೀವಹಾನಿ ಸಂಭವಿಸಿಲ್ಲ.
ಅಗ್ನಿ ನಂದಿಸುವ ಗ್ಯಾಸ್ ಡೇಟ್‌ಬಾರ್: ಶಾಲೆಯಲ್ಲಿ ಅಗ್ನಿ ನಂದಿಸುವ ಗ್ಯಾಸ್ ಇರಿಸಲಾಗಿತ್ತು. ಆದರೆ ಅದರಲ್ಲಿ ತುಂಬಿದ್ದ ಗ್ಯಾಸ್ ಡೇಟ್ ಬಾರ್ ಆಗಿದ್ದರ ಪರಿಣಾಮ ಅಗ್ನಿ ನಂದಿಸಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಎಚ್ಚೆತ್ತ ಸ್ಥಳಿಯರು: ಸಿಬ್ಬಂದಿ ಅಡುಗೆ ಮಾಡುತ್ತಿರುವ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡ ಶಬ್ಧ ಕೇಳಿಬಂದಿದೆ. ತಕ್ಷಣ ಅಡುಗೆ ಸಿಬ್ಬಂದಿ ಹೊರಗೆ ಓಡಿಬಂದಿದ್ದಾರೆ. ಅಲ್ಲಿದ್ದ ಸ್ಥಳೀಯರು ಚೀಲದ ತಟ್ಟು ನೀರಲ್ಲಿ ಅದ್ದಿ ಬೆಂಕಿ ನಂದಿಸಿ ಅನಾಹುತ ತಡೆದಿದ್ದಾರೆ. ಅಡುಗೆ ಮಾಡುತ್ತಿದ್ದ ಸಿಲಿಂಡರ್ ಗ್ಯಾಸ್ ಪೈಪ್‌ಗೆ ರಂದ್ರವಾಗಿ ಅನಿಲ ಸೋರಿಕೆಯೇ ಸ್ಫೋಟಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.