“ತುಂಬಿದ ಕೊಡ ತುಳಿಕಿತಲೇ ಪರಾಕ್”

ವಿಜಯನಗರ: ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಾಲಯದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವ ಇಂದು ಅದ್ಧೂರಿಯಾಗಿ ಜರುಗಿತು. ಬಿಲ್ಲೇರಿದ ಗೊರವಯ್ಯ ದೈವವಾಣಿ ನುಡಿದಿದ್ದು, ‘ತುಂಬಿದ ಕೊಡ ತುಳಿಕಿತಲೇ ಪರಾಕ್’ ಎಂದು ನುಡಿದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದರು.
ಹೆಸರಾಂತ ಧಾರ್ಮಿಕ ಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಜಾತ್ರೆಯ ಅಂಗವಾಗಿ ಶುಕ್ರವಾರ ಸಂಜೆ ೫.೩೦ಕ್ಕೆ ಗೋಧೂಳಿ ಸಮಯದಲ್ಲಿ ರಾಮಣ್ಣ ಗೊರವಯ್ಯನವರು ಸುಮಾರು ೧೩ ಅಡಿ ಉದ್ದದ ಬಿಲ್ಲನ್ನು ಏರಿ, ನೆರೆದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ `ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂಬ ದೇವವಾಣಿ ನುಡಿದರು.
ಕಪಿಲಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದ ಗೊರವಯ್ಯ, ಕ್ಷೇತ್ರದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ಅವರ ಆಶೀರ್ವಾದ ಪಡೆದು ದೇವವಾಣಿ ಹೇಳುತ್ತಿದ್ದಂತೆಯೇ ಎಲ್ಲರ ಮನದಲ್ಲಿ ಸಂತೋಷ ಕಂಡುಬಂದಿತು. ಪ್ರತಿ ವರ್ಷ ನುಡಿಯುವ ದೇವವಾಣಿಯಲ್ಲಿ ಆ ವರ್ಷದ ಮಳೆ ಬೆಳೆ, ರಾಜಕೀಯ ಭವಿಷ್ಯ ಅಡಕವಾಗಿರುತ್ತದೆ ಎಂಬ ಪ್ರತೀತಿಯಿದೆ.
ಈ ದೇವವಾಣಿಯಂತೆ ರಾಜ್ಯಕ್ಕೆ ಸಮೃದ್ಧ ಮಳೆ ಬೆಳೆ ಆಗಿ ಇದುವರೆಗೂ ರೈತಬಾಂಧವರು ಎದುರಿಸಿದ ಸಂಕಷ್ಟಗಳೆಲ್ಲ ದೂರಾಗಲಿವೆ. ರಾಜ್ಯ ರಾಜಕೀಯದಲ್ಲಿ ಯಾವ ಗೊಂದಲಗಳಿಲ್ಲದೆ ಸರ್ಕಾರ ಸುಭೀಕ್ಷೆಯಿಂದ ನಡೆಯುವುದು ಎಂದು ಕ್ಷೇತ್ರದ ಧರ್ಮಾಧಿಕಾರಿ ಗುರು ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.
ಕಳೆದ ವರ್ಷ ರಾಜ್ಯದ ಹಲವು ಕಡೆ ಅತಿವೃಷ್ಟಿ ಸಂಭವಿಸಿ ಬಹಳಷ್ಟು ರೈತರ ಬದುಕು ಬರಡಾಗಿ ಹೋಗಿತ್ತು. ಆದರೆ ಈ ಬಾರಿಯ ದೇವವಾಣಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಇದುವರೆಗೂ ಎದುರಿಸಿದ ಸಂಕಷ್ಟಗಳೆಲ್ಲಾ ದೂರಾಗುವವವು ಎಂದು ನೆರೆದ ಭಕ್ತರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸದ ತುಕಾರಾಂ, ಶಾಸಕ ಕೃಷ್ಣಾನಾಯ್ಕ್, ಕನಕಗುರು ಪೀಠದ ಗುರು ನಿರಂಜನಾನಂದಪುರಿ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ, ಎಸ್.ಪಿ ಶ್ರೀಹರಿಬಾಬು, ತಹಶೀಲ್ದಾರ ಕೆ.ಸಂತೋಷ, ತಾ.ಪಂ ಇಒ ಉಮೇಶ ಹಾಗೂ ಧಾರ್ಮಿಕದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಸವಿತಾ, ಇಒ ಹನುಮಂತಪ್ಪ ಸೇರಿದಂತೆ ಲಕ್ಷಾಂತರ ಭಕ್ತರು ಇದ್ದರು.