ವಿಜೃಂಭಣೆಯ ಉಳವಿ ಚನ್ನಬಸವೇಶ್ವರ ಮಹಾರಥೋತ್ಸವ

ಜೋಯಿಡಾ(ಉತ್ತರ ಕನ್ನಡ): ಹರ..ಹರ.. ಮಹಾದೇವ, ಅಡಿಕೇಶ್ವರ ಮಡಿಕೇಶ್ವರ ಹರ..ಹರ.. ಮಹಾದೇವ ಎನ್ನುವ ಜಯಘೋಷ… ಸಹಸ್ರ ಸಹಸ್ರ ಭಕ್ತ ಸಮೂಹ. ಶೃಂಗಾರಗೊಂಡ ಮಹಾರಥ.. ಗುರುವಾರ ಸಂಜೆ ಉಳವಿಯ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವದ ಸಂಭ್ರಮ. ಎಲ್ಲಿ ನೋಡಿದರಲ್ಲಿ ಸೇರಿರುವ ಭಕ್ತಜನರ ಜಯಘೋಷ.
ಮಹಾರಥವನ್ನು ಭಕ್ತಿಯ ಜಯ ಘೋಷದೊಂದಿಗೆ ಎಳೆಯುತ್ತಾ ಸಾಗುತ್ತಿದಂತೆ ರಥದ ಮೆಲೆ ಉತ್ತತ್ತಿ, ಬಾಳೆಹಣ್ಣು, ಹೂಮಾಲೆಗಳ ಸುರಿಮಳೆಗೈದ ಭಕ್ತಸಾಗರದ ನಡುವೆ ಶ್ರೀ ಚೆನ್ನಬಸವೇಶ್ವರರ ಮಹಾರಥೋತ್ಸವ ಮುಸ್ಸಂಜೆಯ ಹೊತ್ತಿಗೆ ಸಂಪನ್ನಗೊಂಡಿತು.
ಮಹಾರಥೋತ್ಸವಕ್ಕೆ ಚಾಲನೆ ….
ನಾಲ್ಕು ಗಂಟೆಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರೂ ಆದ ಆರ್.ವಿ.ದೇಶಪಾಂಡೆ ಶ್ರೀ ಚೆನ್ನಬಸವೇಶ್ವರರ ಮಹಾರಥಕ್ಕೆ ಪೂಜೆ ಸಲ್ಲಿಸಿ, ಕಾಯಿ ಒಡೆದು ಟ್ರಸ್ಟ್ ಕಮಿಟಿ ಸದಸ್ಯರೊಟ್ಟಿಗೆ ರಥದ ಹಗ್ಗ ಎಳೆಯುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಹಗ್ಗ ಹಿಡಿದು ರಥವನ್ನು ವೀರಭದ್ರ ಗುಡಿಯವರೆಗೂ ಉತ್ಸಾಹದಿಂದ ಎಳೆಯುತ್ತಾ ಸಾಗಿದರು. ರಥಬೀದಿಯ ತುಂಬ ಹರ..ಹರ.. ಮಹಾದೇವ ಎನ್ನುವ ಜಯಘೋಷ ಮೊಳಗುತ್ತಾ ಸಾಗಿತ್ತು.
ಈ ಸಂರ್ಭದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಂಜಯ ಕಿತ್ತೂರ, ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಬಿ.ಸಿ. ಉಮಾಪತಿ, ವಿರೇಶ ಕಂಬಳಿ, ಅಶ್ವಿನ, ನಿಜಲಿಂಗಯ್ಯ ಹಿರೇಮಠ, ದೇವಸ್ಥಾನದ ಮುಖ್ಯ ಅರ್ಚಕ ಶಂಕರಯ್ಯ ಕಲ್ಮಠ, ಕಾರ್ಯದರ್ಶಿ ಎಂ.ಸಿ.ಉಪ್ಪಿನಮಠ, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ನಂದಿಗದ್ದೆ ಗ್ರಾ.ಪಂ ಅಧ್ಯಕ್ಷ ಅರುಣ ದೇಸಾಯಿ ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎನ್. ಅವರ ಮಾರ್ಗದರ್ಶನದಂತೆ ಡಿ.ವೈಎಸ್.ಪಿ. ಶಿವಾನಂದ ಮದರಕಂಡಿ ಹಾಗೂ ಜೋಯಿಡಾ ಸಿ.ಪಿ.ಐ. ಹರಿಹರ ಜಾತ್ರೋತ್ಸವದ ಭದ್ರತೆ ವಹಿಸಿದ್ದರು.
೧೧೭೫ ಚಕ್ಕಡಿ ಗಾಡಿಗಳು: ಈ ಬಾರಿ ೧೧೭೫ ಚಕ್ಕಡಿ ಗಾಡಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು. ಕಂಡುಬಂದಿತ್ತು. ಕುದುರೆ ಬಂಡಿಗಳು ಕಂಡುಬಂದವು. ಈ ಬಾರಿ ಜಾತ್ರೋತ್ಸವದ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಸಾರಾಯಿ ನಿಷೇಧ ಹೇರಿಕೆಯ ಪರಿಣಾಮ ಅಹಿತಕರ ಘಟನೆಗಳು, ಜಗಳ ನಡೆಯಲಿಲ್ಲ.